ಜಿಲ್ಲೆ

ಮೊಘಲರು ಆಕ್ರಮಿಸಿದ ಹಿಂದೂ ಶ್ರದ್ಧಾ ಕೇಂದ್ರ ಮುಸ್ಲಿಮರು ಬಿಟ್ಟು ಕೊಡಲಿ: ಸಿ.ಟಿ. ರವಿ ಕೋರಿಕೆ

ಉಡುಪಿ: ಅತಿಕ್ರಮಣದ ಜಾಗದಲ್ಲಿ ನಮಾಜ್​ ಮಾಡಿದರೆ ಅದು ಹರಾಮ್​ ಆಗುತ್ತದೆ ಎಂದು ಸ್ವತ: ಮುಸಲ್ಮಾನರೇ ಹೇಳುತ್ತಾರೆ. ರಾಮ ಜನಿಸಿದ ಜಾಗದಷ್ಟೇ ಕೃಷ್ಣನ ಮಥುರಾ ಸಹ ಹಿಂದುಗಳಿಗೆ ಪವಿತ್ರ ಸ್ಥಳ. ಜ್ಞಾನವಾಪಿಯ ನಂದಿಯೂ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ಹೀಗಾಗಿ ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಮುಸಲ್ಮಾನರಿಗೆ ಸಲಹೆ ನೀಡಿದರು.

ಉಡುಪಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸನಾತನಿಗಳ ವಿರುದ್ಧ ಮಾಡಿದ ಪಾಪವನ್ನು ಈಗಿರುವ ತಾವುಗಳು ಹೊತ್ತುಕೊಳ್ಳಬೇಡಿ. ಹಿಂದಿನವರು ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಿಕೊಳ್ಳಲು ತಮಗೆ ಈಗಲೂ ಅವಕಾಶ ಇದೆ ಎಂದರು.

ಮೊಯ್ಲಿ ಸರ್ಟಿಫಿಕೆಟ್​ ಬೇಕಾ?
ಪ್ರಧಾನಿ ನರೇಂದ್ರ ಮೋದಿ 11 ದಿನ ಉಪವಾಸ ಮಾಡಿರೋದು ಡೌಟ್​ ಎಂದಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮಗೆ ವೀರಪ್ಪ ಮೊಯ್ಲಿ ಅವರ ಸರ್ಟಿಫಿಕೆಟ್​ನ ಅವಶ್ಯಕತೆ ಇದೆಯಾ? ನಾನು ದೇವಸ್ಥಾನಕ್ಕೆ ಹೋಗಲ್ಲ, ಸಂವಿಧಾನ ಮುಖ್ಯ ಎಂದು ಪ್ರಿಯಾಂಕ ರ್ಖಗೆ ಹೇಳಿದ್ದಾರೆ. ಸಂವಿಧಾನ ನಮಗೂ ಮುಖ್ಯ. ಆದರೆ, ಸಂವಿಧಾನದ ಮೊದಲ ಪುಟದಲ್ಲಿ ರಾಮ ಇದ್ದಾನೆ. ಡಿಕೆ ಶಿವಕುಮಾರ್​ "ರಾಮ ಯಾರಪ್ಪನ ಸ್ವತ್ತು ಅಲ್ಲ' ಎನ್ನುತ್ತಾರೆ. ರಾಮನನ್ನು ಯಾರ ಅಪ್ಪನ ಸ್ವತ್ತು ಮಾಡಲು ಸಾಧ್ಯವಿಲ್ಲ. ಅದರೆ, ಕಾಂಗ್ರೆಸಿಗರು ಬಾಬರ್​ ಮತ್ತು ಅವನ ಸಂತಾನವನ್ನು ಅಪ್ಪನಿಗಿಂತ ಹೆಚ್ಚಾಗಿ ಹೊತ್ತುಕೊಂಡಿದ್ದಾರೆ ಎಂದು ಟೀಕಿಸಿದರು.

ಅಕ್ಷಮ್ಯ ಅಪರಾಧ:
ಹಿರೇಮಗಳೂರು ಕಣ್ಣನ್​ಗೆ ನೋಟಿಸ್​ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಣ ವಾಪಸ್​ ಕೇಳುವುದು ಅಕ್ಷಮ್ಯ. ಇದು ಕಾಂಗ್ರೆಸ್​ ಸರ್ಕಾರದ ಮಾನಸಿಕತೆ ತೋರಿಸುತ್ತದೆ ಎಂದರು.

"ಮೋದಿ ಮತ್ತೊಮ್ಮೆ' ಗೋಡೆ ಬರಹಕ್ಕೆ ಚಾಲನೆ
"ಮೋದಿ ಮತ್ತೊಮೆ' ಗೋಡೆ ಬರಹ ಅಭಿಯಾನಕ್ಕೆ ಕಡಿಯಾಳಿಯಲ್ಲಿ ಸಿ.ಟಿ. ರವಿ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್​ಕುಮಾರ್​ ಕುಂದಾಪುರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್​ ಶೆಟ್ಟಿ, ಮಾಜಿ ಶಾಸಕ ಕೆ.ರಘುಪತಿ ಭಟ್​ ಇತರರು ಉಪಸ್ಥಿತರಿದ್ದರು.