ಹೊನ್ನಾಳಿ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ವರಿಷ್ಠರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಅವರದೇ ಪಕ್ಷದ ಹೊನ್ನಾಳಿಯ ಮುಖಂಡರನೇಕರು ತಿರುಗಿ ಬಿದ್ದಿದ್ದಾರೆ.
ಏನೂ ಕೆಲಸ ಮಾಡದೆ ಜಿಲ್ಲಾಧ್ಯಕ್ಷ ಪಟ್ಟ ಸಿಕ್ಕರೂ ಪಕ್ಷದ ಸಂಘಟನೆಯಲ್ಲಿ ತೊಡಗದೆ ಸುಮ್ಮನೆ ಕುಳಿತಿರುವ ವಿರೇಶ ಹನಗವಾಡಿ ಅವರು, ಯಾವುದಾದರೂ ಗ್ರಾಮಕ್ಕೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಪ್ರಚಾರ ಮಾಡಿದ್ದರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಜಿಲ್ಲಾ ಕೇಂದ್ರದಿಂದ ಹೊರಬಂದು ತಾಲೂಕು ಪ್ರವಾಸ ಕೈಗೊಳ್ಳುವಂತೆ ಚೀಲೂರು ಬಿಜೆಪಿ ಯುವ ಮುಖಂಡ ಕರಿಬಸಪ್ಪ ಅಂಗಡೇರ್, ಎಚ್. ಮಲ್ಲಪ್ಪ, ಹಾಲಸ್ವಾಮಿ, ಎ.ಕೆ. ಹನುಮಂತಪ್ಪ ಇತರರು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಾಲೆಳೆದಿದ್ದಾರೆ.
ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂರದೆ ಹೊನ್ನಾಳಿ- ನ್ಯಾಮತಿ ತಾಲೂಕುಗಳ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಸಾಧನೆ ಕುರಿತು ಮಾಜಿ ಸಚಿವರು ಪ್ರಚಾರ ಮಾಡುತ್ತಿದ್ದಾರೆ ಎಂದು ನೆನೆಪಿಸಿದರು.
ಕರೋನಾ ವೇಳೆ ಕೋವಿಡ್ ಕೇಂದ್ರದಲ್ಲೇ ವಾಸ್ತವ್ಯ ಹೂಡಿ ರೋಗಿಗಳಿಗೆ ಧೈರ್ಯ ತುಂಬಿದ, ರೇಣುಕಾಚಾರ್ಯ ಅವರ ಬಗ್ಗೆ ಪಕ್ಷದ ವರಿಷ್ಠರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಕೆಲಸ ಮಾಡಿರುವ ಅವರ ರೇಣುಕಾಚಾರ್ಯ ಅವರ ಕುರಿತು ಜವಾಬ್ಧಾರಿಯಿಂದ ಮಾತನಾಡಬೇಕು ಎಂದಿದ್ದಾರೆ.