ಜಿಲ್ಲೆ

ಬಸ್ ಸೌಲಭ್ಯ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದ ಡಿಪೋ ಮ್ಯಾನೇಜರ್: ಅಧಿಕಾರಿಗೆ ಚಳಿ ಬಿಡಿಸಿದ ಮಾಜಿ ಸಚಿವ

ಮಂಡ್ಯ: ಬಸ್ ನಿಲುಗಡೆಗಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವುದರ ಜತೆಗೆ ಕೇಸ್ ಹಾಕುವ ಬೆದರಿಕೆ ಹಾಕಿದ ಡಿಪೋ ಮ್ಯಾನೇಜರ್‌ನನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ವಿದ್ಯಾರ್ಥಿಗಳನ್ನು ಡಿಪೋ ಮ್ಯಾನೇಜರ್ ಅಪ್ಪಿರೆಡ್ಡಿ ಪಟ್ಟಣ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿ.ಎಸ್.ಪುಟ್ಟರಾಜು, ಅಧಿಕಾರಿಗೆ ಚಳಿ ಬಿಡಿಸಿದರು. ಮಾತ್ರವಲ್ಲದೆ ಇನ್ನು ಮುಂದೆ ವಿದ್ಯಾರ್ಥಿಗಳ ವಿಚಾರದಲ್ಲಿ ಮತ್ತೆ ಇಂತಹ ನಡವಳಿಕೆ ತೋರದಂತೆ ಎಚ್ಚರಿಕೆ ನೀಡಿದರು.

ಏನಿದು ಘಟನೆ?: ಟಿ.ಎಸ್.ಛತ್ರ ಗ್ರಾಮದ ಬಳಿ ವಿದ್ಯಾರ್ಥಿಗಳು ಬಸ್ ಕಾಯುತ್ತಿದ್ದ ಸಂದರ್ಭದಲ್ಲಿ ನಾಗಮಂಗಲ ಕಡೆಯಿಂದ ಬಂದ ಹಲವಾರು ಸಾರಿಗೆ ಬಸ್‌ಗಳು ನಿಲ್ಲಿಸದೆ ಮುಂದೆ ಹೋಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಅಪ್ಪಿರೆಡ್ಡಿ ಅವರು ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳ ವಿರುದ್ದ ಘೋಷಣೆ ಮೊಳಗಿಸಿದ್ದಾರೆ. ಬಸ್‌ಗಳು ನಿಲ್ಲಿಸದೆ ಹೋಗುವುದರಿಂದ ನಿತ್ಯ ತರಗತಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರಿಂದ ಕೋಪಗೊಂಡ ಅಪ್ಪಿರೆಡ್ಡಿ, ಮೂವರು ವಿದ್ಯಾರ್ಥಿಗಳನ್ನು ಬಸ್‌ನಲ್ಲಿಯೇ ಕರೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ. ಮಾತ್ರವಲ್ಲದೆ ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಮಾಹಿತಿ ತಿಳಿದು ಠಾಣೆಗೆ ಆಗಮಿಸಿದ ಗ್ರಾಮಸ್ಥರು, ಸಿ.ಎಸ್.ಪುಟ್ಟರಾಜು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಬಂದ ಸಿಎಸ್ಪಿ, ಅಪ್ಪಿರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತರಗತಿಗೆ ತೆರಳುವ ವಿದ್ಯಾರ್ಥಿಗಳನ್ನು ಠಾಣೆಗೆ ಏಕೆ ಕರೆದು ಬಂದಿದ್ದೀಯಾ?. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಮೊದಲು ಬಸ್ ವ್ಯವಸ್ಥೆ ಕಲ್ಪಿಸಿ, ಅದನ್ನು ಬಿಟ್ಟು ಠಾಣೆಗೆ ಎಳೆದು ತಂದಿದ್ದೀಯಾ. ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಲು ನೀನ್ಯಾರು?. ಆ ಮಕ್ಕಳ ಪಾಲಕರು ಕಟ್ಟುತ್ತಿರುವ ತೆರಿಗೆ ಹಣದಿಂದ ನಿನಗೆ ಸಂಬಳ ಬರುತ್ತಿದೆ. ನಿಮ್ಮ ಮಕ್ಕಳನ್ನು ಇದೇ ಥರ ಠಾಣೆಗೆ ಕರೆದುಕೊಂಡು ಬರುತ್ತೀರಾ?. ರೈತರ ಮಕ್ಕಳೆಂದರೆ ಅಷ್ಟೊಂದು ತಾತ್ಸಾರವೇ ಎಂದು ಹಿಗ್ಗಾಮುಗ್ಗಾ ಜಾಡಿಸಿದರು. ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಉಂಟಾದರೆ ಮುಂದಿನ ದಿನಗಳಲ್ಲಿ ತಕ್ಕಶಾಸ್ತಿ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಯಿಂದ ವಾಪಸ್ ಶಾಲೆಗೆ ಕಳುಹಿಸಿಕೊಟ್ಟರು.

ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ಕಣಿವೆ ಯೋಗೇಶ್, ಪುರಸಭೆ ಸದಸ್ಯ ಕೃಷ್ಣ, ಶಿವಕುಮಾರ್, ಚಂದ್ರು, ಇಮ್ರಾನ್, ಚಂದ್ರಶೇಖರ್, ಟಿ.ಎಸ್.ಛತ್ರ ವಿಜಿ ಇತರರಿದ್ದರು.