ತುಮಕೂರು: ಸುಳ್ಳು ಭರವಸೆಗಳ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರದ ಚಳಿ ಬಿಡಿಸಲು ವಿಧಾನಸೌಧದ ಒಳಗೆ ಹಾಗೂ ಹೊರಗೆ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ನಗರದ ಗಾಜಿನಮನೆಯಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಕಾರ್ಯಕ್ರಮಗಳನ್ನು ಯಾವ ಷರತ್ತುಗಳಿಲ್ಲದೆ ಅನುಷ್ಟಾನಕ್ಕೆ ಒತ್ತಾಯಿಸೊಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ಮಾಡಬೇಕಿದೆ, ನಮ್ಮ ಮತಗಳು ನಮಗೆ ಬಂದಿವೆ ಹತಾಷರಾಗಬೇಕಿಲ್ಲ, ವಿಧಾನ ಮಂಡಲ ಅಧಿವೇಶನ ಆರಂಭವಾದ ದಿನ ವಿಧಾನಸೌಧದ ಮುಂದೆ ನನ್ನ ನೇತೃತ್ವದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಹತ್ತು ದಿನ ಸತ್ಯಾಗ್ರಹ ನಡೆಸುತ್ತೇನೆ.
ಜನಸಂಘದಿಂದ ಇಂದಿನವರೆಗೂ ಸಾಕಷ್ಟು ಜನರು ಪಕ್ಷ ಕಟ್ಟಿದ್ದಾರೆ, ನಾವು ಚುನಾವಣೆಯಲ್ಲಿ ಸೋತಿಲ್ಲ ಸುಳ್ಳು ಭರವಸೆಕೊಟ್ಟು ಜನರನ್ನು ಮೋಸಗೊಳಿಸಿ ಅಧಿಕಾರಕ್ಕೇರಿದ್ದಾರೆ. ಅವರ ಬಂಡವಾಳವನ್ನು ಜನರ ಮುಂದೆ ಬಯಲುಗೊಳಿಸುತ್ತೇವೆ ಎಂದರು.
ವಿಧಾನಸೌಧದ ಒಳಗೆ ಹಾಗೂ ಹೊರಗೆ ಹೋರಾಟ ಮಾಡೊಣ, ಒಬ್ಬನೇ ಶಾಸಕನಿದ್ದಾಗಲೂ ಎದೆಗುಂದದೆ ಹೋರಾಟ ಮಾಡಿದ ಫಲವಾಗಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಪಡೆದಿದೆ, ಸಾಕಷ್ಟು ಜನಪರ ಯೋಜನೆ ನೀಡಿದ್ದು ಸಾಧನೆಯಲ್ಲವೇ? ಇದನ್ನು ಕಾರ್ಯಕರ್ತರು ಮಾತನಾಡಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದರು.
ಎಸ್.ಮಲ್ಲಿಕಾರ್ಜುನಯ್ಯ ಅವರಂತಹ ಸಾಕಷ್ಟು ಜನರ ನಾಯಕತ್ವದಲ್ಲಿ ಪಕ್ಷ ಬೆಳೆದು ನಿಂತಿದೆ, ಪ್ರತಿಹಳ್ಳಿಯಲ್ಲಿಯೂ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಹೋಗಬೇಕು. ಅಧಿಕಾರದ ಮದದಲ್ಲಿರುವ ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರುತ್ತದೊ ನೋಡೋಣ, ರಾಜ್ಯದೆಲ್ಲೆಡೆ ಪ್ರವಾಸ ನಡೆಸಿ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸೋಣ ಎಂದು ಹೇಳಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ದೇಶದ ಭದ್ರತೆಗಾಗಿ ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ. ಪ್ರತಿಷ್ಟಿತ ಸಂಸ್ಥೆಗಳ ಮುಖ್ಯಸ್ಥರು ಅಮೇರಿಕಾ ಪ್ರವಾಸದಲ್ಲಿರುವ ನಮ್ಮ ಪ್ರಧಾನಿಯವರನ್ನು ಭೇಟಿಯಾಗಿ ದೇಶದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ ಎಂದರು.
ದೇಶದಲ್ಲಿ ಸಾಕಷ್ಟು ಜನಪರ ರೂಪಿಸಿದ ಹೆಗ್ಗಳಿಕೆ ಬಿಜೆಪಿ ಸರ್ಕಾರಕ್ಕಿದೆ, ಉತ್ತಮ ಆಡಳಿತ ನೀಡುತ್ತಿರುವ ನರೇಂದ್ರಮೋದಿ ಅವರ ನಾಯಕತ್ವ ಅನಿವಾರ್ಯವಾಗಿದ್ದು ಅವರನ್ನು ಮುಂದಿನ ಚುನಾವಣೆಯಲ್ಲಿಯೂ ಗೆಲ್ಲಿಸಬೇಕು ಎಂದರು.
ವೇದಿಕೆಯಲ್ಲಿ ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ, ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ಎನ್.ರವಿಕುಮಾರ್, ನವೀನ್, ಚಿದಾನಂದಗೌಡ, ಮಾಜಿ ಸಚಿವ ಬಿ.ಸಿ.ನಾಗೇಶ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಮಾಜಿ ಶಾಸಕರಾದ ಎಂ.ರೇಣುಕಾಚಾರ್ಯ, ಮಸಾಲೆ ಜಯರಾಮ್, ಮುಖಂಡರಾದ ಎಂ.ಬಿ.ನಂದೀಶ್, ದಿಲೀಪ್, ವೈ.ಎಚ್.ಹುಚ್ಚಯ್ಯ ಮತ್ತಿತರರು ಇದ್ದರು.