ಸದೇಶ್ ಕಾರ್ಮಾಡ್ ಮೈಸೂರು
ಟ್ರೇಡ್ ಲೈಸೆನ್ಸ್ ನೀಡಲು ಹಾಗೂ ನವೀಕರಣ ಮಾಡಲು ಪ್ರಸ್ತುತ ನಗರ ಪಾಲಿಕೆಯು ತನ್ನದೇ ಆದ ತಂತ್ರಾಂಶವನ್ನು ಬಳಕೆ ಮಾಡುತಿತ್ತು. ಆದರೆ, ಇದೀಗ ರಾಜ್ಯಾದ್ಯಂತ ಒಂದೇ ಮಾದರಿಯ ತಂತ್ರಾಂಶ ಬಳಕೆ ಮಾಡಬೇಕು ಎಂಬ ಸರ್ಕಾರದ ನಿರ್ದೇಶನ ಪ್ರಕಾರ ಏಪ್ರಿಲ್ 1 ರಿಂದ ಮೈಸೂರು ನಗರದಲ್ಲಿ ಹೊಸ ತಂತ್ರಾಂಶ ಜಾರಿಗೆ ತರಲು ಸಿದ್ಧತೆ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರ ವರ್ತಕರಿಗೆ ಟ್ರೇಡ್ ಲೈಸೆನ್ಸ್ ನೀಡುವ ಸಲುವಾಗಿ ‘ವ್ಯಾಪಾರ’ ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಈ ತಂತ್ರಾಂಶದ ಮೂಲಕವೇ ಪ್ರಸ್ತುತ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಟ್ರೇಡ್ ಲೈಸೆನ್ಸ್ ನೀಡುತ್ತಿದ್ದು, ಇನ್ನು ನಗರ ಪಾಲಿಕೆಯು ಸಹ ‘ವ್ಯಾಪಾರ ತಂತ್ರಾಂಶ’ವನ್ನು ಬಳಕೆ ಮಾಡಲಿದೆ.
ಇದುವರೆಗೆ ನಗರ ಪಾಲಿಕೆ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಓಯಸಿಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಟ್ರೇಡ್ ಲೈಸೆನ್ಸ್ ನೀಡುತಿತ್ತು. ನಗರ ಪಾಲಿಕೆಯು ಅಭಿವೃದ್ಧಿ ಪಡಿಸಿದ ತಂತ್ರಾಂಶದಲ್ಲಿ ಯಾವುದೇ ಲೋಪದೋಷಗಳು ಇರಲಿಲ್ಲ. ಆದರೆ, ರಾಜ್ಯಾದ್ಯಂತ ಒಂದೇ ಮಾದರಿಯ ತಂತ್ರಾಂಶದಲ್ಲಿ ಟ್ರೇಡ್ ಲೈಸೆನ್ಸ್ ನೀಡಬೇಕು ಎಂಬ ಸರ್ಕಾರದ ನಿರ್ದೇಶನ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಇದೀಗ ಹೊಸ ತಂತ್ರಾಂಶದ ಅಡಿಯಲ್ಲಿ ಟ್ರೇಡ್ ಲೈಸೆನ್ಸ್ ನೀಡಲು ನಿರ್ಧಾರ ಮಾಡಿದೆ.
ತಾತ್ಕಾಲಿಕ ಸೇವೆ ಸ್ಥಗಿತ: ‘ವ್ಯಾಪಾರ ತಂತ್ರಾಂಶ’ದ ಮೂಲಕ ಟ್ರೇಡ್ ಲೈಸೆನ್ಸ್ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಹಳೆಯ ತಂತ್ರಾಂಶದ ಮೂಲಕ ಟ್ರೇಡ್ ಲೈಸೆನ್ಸ್ ನೀಡುವುದು ಹಾಗೂ ನವೀಕರಣ ಮಾಡುವುದನ್ನು ಮಾರ್ಚ್ ತಿಂಗಳಿನಿಂದ ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ ತಿಂಗಳಿನಿಂದ ಹೊಸ ಆರ್ಥಿಕ ವರ್ಷ ಶುರುವಾಗುವ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ನಗರ ಪಾಲಿಕೆಯು ‘ವ್ಯಾಪಾರ ತಂತ್ರಾಂಶ’ವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಹೊಸ ತಂತ್ರಾಂಶ ಬಳಕೆ ಹೇಗೆ?:
ಟ್ರೇಡ್ ಲೈಸೆನ್ಸ್ ಪಡೆಯಲು ಬಯಸುವವರು ಹಾಗೂ ನವೀಕರಣ ಮಾಡಲು ಉದ್ದೇಶಿಸಿರುವ ಠಿಠಿ://ಡಿಡಿಡಿ.ಞ್ಟ್ಚ.ಜಟ.ಜ್ಞಿ/ ವೆಬ್‌ಸೈಟ್‌ಗೆ ಭೇಟಿ ನೀಡಿ ‘ಸಿಟಿಜನ್ ಆನ್‌ಲೈನ್ ಸರ್ವೀಸ್’ ವಿಭಾಗವನ್ನು ಕ್ಲಿಕ್ ಮಾಡಿದರೆ ವಿವಿಧ ಸೇವೆಗಳು ತೆರೆದುಕೊಳ್ಳಲಿದ್ದು, ಅದರಲ್ಲಿ ‘ಅಪ್ಲೈ ಫಾರ್ ಟ್ರೇಡ್ ಲೈಸನ್ಸ್’ ವಿಭಾಗವನ್ನು ಕ್ಲಿಕ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ತುಂಬಿ ಟ್ರೇಡ್‌ಲೈಸೆನ್ಸ್ ಪಡೆದುಕೊಳ್ಳಬಹುದು. ಈ ತಂತ್ರಾಂಶದ ಮೂಲಕವೇ ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಸಹ ಪಾವತಿ ಮಾಡಬಹುದು. ವರ್ತಕರು ಸಲ್ಲಿಸಿದ ಅರ್ಜಿಯು ಪ್ರಸ್ತುತ ಯಾವ ಹಂತದಲ್ಲಿ ಇದೆ ಎಂಬುದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಪರವಾನಗಿಯನ್ನು ಆನ್‌ಲೈನ್ ನಲ್ಲಿಯೇ ಡೌನ್ ಮಾಡಿಕೊಳ್ಳಬಹುದು. ಈ ಹಿಂದೆ ಹಲವು ಹಂತದ ಪರಿಶೀಲನೆ ನಡೆಯುತಿತ್ತು. ಆದರೆ, ಹೊಸ ತಂತ್ರಾಂಶದಲ್ಲಿ ಕೇವಲ ಎರಡು ಹಂತದ ಪರಿಶೀಲನೆ ಮಾತ್ರ ನಡೆಯುತ್ತದೆ.
ನೂತನ ತಂತ್ರಾಂಶದ ಉದ್ದೇಶವೇನು?:
ರಾಜ್ಯದಲ್ಲಿರುವ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಮೈಸೂರು ನಗರ ಪಾಲಿಕೆಯ ಮಾದರಿಯಲ್ಲಿ ಸ್ವಂತ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುವಷ್ಟು ಆರ್ಥಿಕ ಸಂಪನ್ಮೂಲ ಇರುವುದಿಲ್ಲ. ಅಲ್ಲದೆ, ಕೆಲವು ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಂಪನ್ಮೂಲವಿದ್ದರೂ ಆನ್‌ಲೈನ್ ಸೇವೆಗೆ ತೆರೆದುಕೊಳ್ಳಲು ಆಸಕ್ತಿ ತೋರುವುದಿಲ್ಲ. ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಟ್ರೇಡ್ ಲೈಸೆನ್ಸ್ ನೀಡಲು ವಿವಿಧ ರೀತಿಯ ಷರತ್ತುಗಳನ್ನು ವಿಧಿಸುತ್ತಿರುವುದನ್ನು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಟ್ರೇಡ್ ಲೈಸೆನ್ಸ್ಸ್ ಏಕರೂಪದಲ್ಲಿ ಇರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ವ್ಯಾಪಾರ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದರೂ ಸಹ ಮೈಸೂರು ನಗರ ಪಾಲಿಕೆ ತನ್ನದೇ ಆದ ತಂತ್ರಾಂಶವನ್ನು ಹೊಂದಿದ್ದ ಹಿನ್ನೆಲೆಯಲ್ಲಿ ವ್ಯಾಪಾರ ತಂತ್ರಾಂಶವನ್ನು ಬಳಕೆ ಮಾಡುತ್ತಿರಲಿಲ್ಲ.
ಸರ್ವೇಗೆ ಸೂಚನೆ:
ಪ್ರಸ್ತುತ ನಗರದಲ್ಲಿ ಎಷ್ಟು ವರ್ತಕರು ಟ್ರೇಡ್ ಲೈಸೆನ್ಸ್ಸ್ ಪಡೆದುಕೊಂಡಿದ್ದಾರೆ. ಎಷ್ಟು ವರ್ತಕರು ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಲು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಈ ಸರ್ವೇ ಕಾರ್ಯ ಸದ್ಯದಲ್ಲಿಯೇ ನಡೆಯಲಿದೆ. ಪ್ರತಿಯೊಂದು ವರ್ತಕರನ್ನು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ಸ್ ವ್ಯಾಪ್ತಿಯೊಳಗೆ ತರುವ ಗುರಿಯನ್ನು ನಗರ ಪಾಲಿಕೆ ಹೊಂದಿದೆ.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಾರ್ಚ್ 1 ರಿಂದ ನಗರದಲ್ಲಿ ‘ವ್ಯಾಪಾರ ತಂತ್ರಾಂಶ’ದ ಮೂಲಕ ವರ್ತಕರಿಗೆ ಟ್ರೇಡ್ ಲೈಸೆನ್ಸ್ ನೀಡಲಾಗುವುದು. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಒಂದೇ ಮಾದರಿಯ ತಂತ್ರಾಂಶದಲ್ಲಿ ಟ್ರೇಡ್ ಲೈಸೆನ್ಸ್ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ನಿರ್ದೇಶನ ನೀಡಿದೆ. ಹೊಸ ತಂತ್ರಾಂಶ ಬಳಕೆದಾರರ ಸ್ನೇಹಿಯಾಗಿದ್ದು, ವರ್ತಕರು ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬಹುದು.
ಶೇಖ್ ತನ್ವೀರ್ ಆಸಿಫ್, ನಗರ ಪಾಲಿಕೆ ಆಯುಕ್ತ
ಹೊಸ ವ್ಯಾಪಾರ ತಂತ್ರಾಂಶದಿಂದ ವರ್ತಕರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಹಿಂದೆ ಸಿಆರ್ ಪೂರ್ಣವಾಗದ ಕಟ್ಟಡದಲ್ಲಿ ವ್ಯಾಪಾರ ನಡೆಸುವ ವರ್ತಕರು ದುಪ್ಪಟ್ಟು ತೆರಿಗೆಯನ್ನು ನೀಡಬೇಕಾಗಿತ್ತು. ಆದರೆ, ಹೊಸ ತಂತ್ರಾಂಶದಲ್ಲಿ ದುಪ್ಪಟ್ಟು ತೆರಿಗೆ ಪಡೆಯಲು ಅವಕಾಶ ಇಲ್ಲ. ಅಲ್ಲದೆ ಈ ಹಿಂದೆ ವಿವಿಧ ಹಂತದ ಪರಿಶೀಲನೆ ನಡೆಯುತಿತ್ತು. ಆದರೆ, ಇದೀಗ ಪರಿಶೀಲನೆಯು ಕೇವಲ 2 ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಹೀಗಾಗಿ ವರ್ತಕರಿಗೆ ಹೊಸ ತಂತ್ರಾಂಶವು ಹೆಚ್ಚಿನ ಅನುಕೂಲವಾಗಲಿದೆ.
ಡಾ.ವೆಂಕಟೇಶ್, ಪಾಲಿಕೆ ಆರೋಗ್ಯಾಧಿಕಾರಿ