ಶ್ರವಣ್‌ಕುಮಾರ್ ನಾಳ ಮಂಗಳೂರು
ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್(ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಯಂತ್ರದ ಕಾರ್ಯವೈಖರಿ ಕುರಿತು ಜನರಲ್ಲಿ ಜಾಗೃತಿ ಹಾಗೂ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇವಿಎಂ ಕಾರ್ಯ ವೈಖರಿ ಪ್ರಾತ್ಯಕ್ಷಿಕೆ ಮೂಲಕ ಪ್ರಾಯೋಗಿಕ ಮತದಾನ ನಡೆಯಲಿದೆ.
10 ಬೂತ್‌ಗೆ ಒಂದು ಸೆಕ್ಟರ್‌ನಂತೆ ವಿಭಾಗಿಸಿ ಆಯಾಯಾ ಪಂಚಾಯಿತಿಗಳಲ್ಲಿ ಇವಿಎಂ ಕಾರ್ಯವೈಖರಿ ಪ್ರಾತ್ಯಕ್ಷಿಕೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ತೀರ್ಮಾನಿಸಿದ್ದು, ಜಿಲ್ಲೆಯ ಎಲ್ಲ 223 ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಳೆದ 1 ವಾರದಿಂದ ಮಂಗಳೂರು, ಬಂಟ್ವಾಳ, ಪುತ್ತೂರು, ಕಡಬ, ಸುಳ್ಯ, ಮೂಡುಬಿದಿರೆ ತಾಲೂಕು ಕಚೇರಿಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಪ್ರದರ್ಶನ, ಪ್ರಾಯೋಗಿಕ ಮತದಾನ, ವಿವಿ ಪ್ಯಾಟ್ ಯಂತ್ರದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತಿದೆ.
ಉಡುಪಿ ಜಿಲ್ಲೆಯ 153 ಗ್ರಾಪಂಗಳಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಯಂತ್ರದ ಕಾರ್ಯ ವೈಖರಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ಪ್ರಾಯೋಗಿಕ ಮತದಾನ ನಡೆಸಲು ಚುನಾವಣಾ ಆಯೋಗ ಸೂಚನೆ ನೀಡಿದ್ದು, ಇವಿಎಂ ಕಾರ್ಯ ವೈಖರಿ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಈಗಾಗಲೇ ಇವಿಎಂ, ವಿವಿ ಪ್ಯಾಟ್ ಯಂತ್ರಗಳನ್ನು ಬಳಸಿ ಅಣಕು ಮತದಾನ ನಡೆಸಲಾಗಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
* ಇವಿಎಂ ಬಗ್ಗೆ ಜಾಗೃತಿ: ಮತದಾನ ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಅನೇಕ ಗೊಂದಲಗಳಿದ್ದು, 2010ಕ್ಕಿಂತ ಹಿಂದಿನ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮಾತ್ರ ಬಳಸಲಾಗುತ್ತಿತ್ತು. ಪೂರೈಕೆಯಾದ ಎಲ್ಲ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ಬಿ.ಇ.ಎಲ್. ಇಂಜಿನಿಯರ್‌ಗಳ ತಂಡ ಪರಿಶೀಲನೆ ನಡೆಸಿ ಪ್ರಮಾಣೀಕರಿಸಿದೆ. ವಿವಿ ಪ್ಯಾಟ್ ಬಳಕೆಯಿಂದ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾನ ಮಾಡಿದ ಕ್ಷಣದಲ್ಲಿ ವೀಕ್ಷಿಸಬಹುದು. ಬ್ಯಾಲೆಟ್ ಯುನಿಟ್‌ನಲ್ಲಿ ಮತಗುಂಡಿ ಒತ್ತಿದ ನಂತರ, ಮತದಾರ ತಾನು ಮತದಾನ ಮಾಡಿದ ವಿವರ ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್‌ವರೆಗೆ ಪ್ರದರ್ಶನಗೊಳ್ಳುತ್ತದೆ. ಮತ ಚಲಾಯಿಸಿದ ಮತದಾರ ಮಾತ್ರ ವೀಕ್ಷಿಸಲು ಅವಕಾಶವಿರುತ್ತದೆ. ಇದರಿಂದ ಯಾವುದೇ ಗೊಂದಲ, ಸಮಸ್ಯೆ, ಅನುಮಾನ ಮತದಾರನಿಗೆ ಉಳಿಯುವುದಿಲ್ಲ. ಮತ ಚಲಾಯಿಸಿದ ವ್ಯಕ್ತಿ ಅಥವಾ ಚಿಹ್ನೆಗೆ ಮತದಾನವಾದ ಕುರಿತಂತೆ ಖಾತ್ರಿಪಡಿಸಿ ಮತಗಟ್ಟೆಯ ಕೊಠಡಿಯಿಂದ ತೆರಳಬಹುದು ಎಂಬ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಇವಿಎಂನಲ್ಲಿ ಡಮ್ಮಿ ಪಕ್ಷಗಳ ಚಿಹ್ನೆಯ ಗುಂಡಿಗಳಿದ್ದು, ಮತದಾನ ಮಾಡಿದ ನಂತರ ಮತದಾರ ಮತ ಚಲಾಯಿಸಿರುವ ಬಗ್ಗೆ ಪುಸ್ತಕದಲ್ಲಿ ಹೆಸರನ್ನು ದಾಖಲಿಸುವುದು ಅಗತ್ಯ. ಪ್ರಾತ್ಯಕ್ಷಿಕೆ ವೇಳೆ ಮತದಾರು ತಮ್ಮ ಸಂದೇಹಗಳನ್ನು ನೇರವಾಗಿ ಬಗೆಹರಿಸಿಕೊಳ್ಳಬಹುದು.
------------------
ಜಿಲ್ಲೆಯಾದ್ಯಂತ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಕಾರ್ಯ ವೈಖರಿ ಕುರಿತು ಪ್ರಾತ್ಯಕ್ಷಿಕೆ ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರಾತ್ಯಕ್ಷಿಕೆಯಲ್ಲಿ ಮತದಾರರು ಪಾಲ್ಗೊಂಡು ಪ್ರಾಯೋಗಿಕ ಮತದಾನ ಮಾಡಿ, ಇವಿಎಂ ಯಂತ್ರದಲ್ಲಿ ಮತ ಚಲಾಯಿಸುವ ಹಾಗೂ ಮತದಾನ ಖಾತ್ರಿ ಮಾಡಿಕೊಳ್ಳುವ ಬಗ್ಗೆ ಮನವರಿಕೆ ಮಾಡಿಕೊಳ್ಳಬಹುದಾಗಿದೆ.
ರವಿಕುಮಾರ್ ಎಂ.ಆರ್., ದ.ಕ ಜಿಲ್ಲಾಧಿಕಾರಿ ಹಾಗೂ ಮುಖ್ಯ ಚುನಾವಣಾಧಿಕಾರಿ
-------------------------------------
ತಾಲೂಕು ಕಚೇರಿಗೆ ಇತ್ತೀಚೆಗೆ ಭೇಟಿ ನೀಡಿರುವ ಸಂದರ್ಭ ಇವಿಎಂ ಕಾರ್ಯವೈಖರಿ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ಪ್ರಾಯೋಗಿಕ ಮತದಾನ ಮಾಡಿದ್ದೇನೆ. ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆ ವಿಷಯದಲ್ಲಿ ವಿಶ್ವಾಸ ಮೂಡಿಸಲು ಸಾಧ್ಯವಿದ್ದು, ಈ ಪ್ರಾತ್ಯಕ್ಷಿಕೆ ಯುವ ಮತದಾರರಿಗೆ ಹಾಗೂ ಮೊದಲ ಬಾರಿಗೆ ಮತದಾನ ಮಾಡುವಂತಹವರಿಗೂ ಸಹಕಾರಿಯಾಗಲಿದೆ.
ರಮೇಶ್ ನಾಯಕ್, ಬೆಳ್ತಂಗಡಿ