ನಾಲಾ ಏರಿ ಜಾಗ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಬೆಳಗೊಳ ಗ್ರಾಮದ ರೈತರು ಕಾವೇರಿ ನೀರಾವರಿ ನಿಗಮದ ನಿರ್ವಹಣೆ ವಿಭಾಗದ ಎಇಇ ಅವರನ್ನು ತರಾಟೆ ತೆಗೆದುಕೊಂಡರು. 
ಜಿಲ್ಲೆ

ನಾಲಾ ಏರಿ ಒತ್ತುವರಿ ತೆರವಿಗೆ ರೈತರ ಆಗ್ರಹ

ಕೆ.ಆರ್.ಸಾಗರ: ನಾಲಾ ಏರಿ ಜಾಗ ಒತ್ತುವರಿ ಮಾಡಿಕೊಂಡು ಖಾಸಗಿ ಶಾಲಾ ಕಟ್ಟಡ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಕಚೇರಿ ಮುಂದೆ ಮಂಗಳವಾರ ಬೆಳಗೊಳ ಗ್ರಾಮದ ರೈತರು ಒತ್ತಾಯಿಸಿದರು.

ಯುವ ರೈತ ಮುಖಂಡ ಬೆಳಗೊಳ ಸುನೀಲ್ ವಿಷಕಂಠು ಸೇರಿದಂತೆ ಇತರ ರೈತರು, ಕೆ.ಆರ್.ಸಾಗರ ನಾಲೆ ನಿರ್ವಹಣೆಯ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಕಟ್ಟಡ ತೆರವಿಗೆ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಎಇಇ ಕಿಶೋರ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಬೆಳಗೊಳ ಬಳಿ ಇರುವ ಗುರುಕುಲ ಶಾಲಾ ಮುಖ್ಯಸ್ಥರು, ನಾಲೆ ಏರಿಯನ್ನೇ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಸೇರಿದಂತೆ ಕಟ್ಟಡವನ್ನು ನಿರ್ಮಿಸಿದ್ದಾರೆ. ನಾಲೆಯ ಒಂದನೇ ಮೈಲಿ ರಸ್ತೆಯ ಏರಿ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆ. ಪರವಾನಗಿ ಪಡೆಯದೆ, ರೈತರು ಓಡಾಟ ನಡೆಸುವ ದಾರಿಯನ್ನೇ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಈಗಾಗಲೇ ಹಲವಾರು ಬಾರಿ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿದರು. ಇದಲ್ಲದೆ ಅಕ್ಕ ಪಕ್ಕದ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿರುವ ಶಾಲೆ ಮುಖ್ಯಸ್ಥರು ಕೂಡಲೇ ಒತ್ತುವರಿಗೆ ತೆರವಿಗೆ ಆಗ್ರಹಿಸಿದರು.

ಎಂಜಿನಿಯರ್ ಕಿಶೋರ್ ಕುಮಾರ್ ರೈತರ ಮನವಿ ಸ್ವೀಕರಿಸಿ ಎರಡು ದಿನದಲ್ಲಿ ಸ್ಥಳ ಪರಿಶೀಲನೆ ಮಾಡಿ, ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತರಾದ ಮಹೇಶ್, ನವೀನ್, ಬಸವರಾಜಣ್ಣ, ವಿನಯ್ ರವಿ, ಶಿವಾನಂದ್ ಇತರರು ಉಪಸ್ಥಿತರಿದ್ದರು.