ತುಮಕೂರಿನಲ್ಲಿ ಬಹುಮುಖಿ ಗೆಳೆಯರ ಬಳಗದ ಅಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಪ್ಪ, ಡಾ.ಅಮ್ಮಸಂದ್ರ ಸುರೇಶ್​, ಹಡವನಹಳ್ಳಿ ವೀರಣ್ಣಗೌಡ ಮತ್ತಿತರರು ಇದ್ದರು. 
ಜಿಲ್ಲೆ

ನಮ್ಮೆದುರಿಗೆ ಕಾಣುವುದೆಲ್ಲ ಸತ್ಯವಲ್ಲ

Everything we see is not the truth

ತುಮಕೂರು ಡೆಸ್ಕ್

ತುಮಕೂರು: ಸಿದ್ಧ ಮಾದರಿಯ ಸಾಮಾಜಿಕ ಸಂರಕ್ಷಣೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದನ್ನು ಮೀರಿ ಬೆಳೆಯುವಂತಹ
ಮನೋಭೂಮಿಕೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಇರುವವರು ಬೆಳೆಸಿಕೊಳ್ಳಬೇಕು
ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಬಹುಮುಖಿ ಗೆಳೆಯರ ಬಳಗ, ಸುದ್ದಿ ಸಂಗಾತಿ ಹಾಗೂ ಅಪೂರ್ವ
ಪ್ರಕಾಶನದಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ "ಅಪ್ಪ ಪ್ರಶಸ್ತಿ' ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಮುಂಗಾರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಬಹಳಷ್ಟು ಜನ ಸಾಮಾಜಿಕ ಸಂರಚನೆಯ ಒಳಗಡೆಯೇ ಇದ್ದಾರೆ. ಅದನ್ನು ದಾಟಿ ಹೊರಬರುತ್ತಿಲ್ಲ. ಆದರೆ ಅದನ್ನು ದಾಟಿ ಹೊರಬರುವ ಕೆಲಸ ಸಾಹಿತಿಗಳು ಮಾಡಬೇಕಿದೆ. ನಾವುಗಳು ಯಾರೂ ಸಹ ಕಾಲವನ್ನು ಮೀರಿ ಬದುಕಬೇಕಿಲ್ಲ, ಕಾಲದೊಳಗೆ ಇದ್ದು, ಕಾಲವನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕು. ಸತಿ ಪದ್ಧತಿ, ಬೆತ್ತಲೆ ಸೇವೆ, ದೇವದಾಸಿ ಇವೆಲ್ಲವೂ ಎಷ್ಟು ಅಮಾನವೀಯ ಎಂಬುದು ಗೊತ್ತಿದೆ. ದೇವದಾಸಿ ಇನ್ನೂ ಜೀವಂತ ಇದೆ. ಇವನ್ನೆಲ್ಲ ಗ್ರಹಿಸುತ್ತಲೇ ಕಾಲಘಟ್ಟದೊಳಗೆ ಇದ್ದು, ಅದನ್ನು ಮೀರುವ ಮನೋಭೂಮಿಕೆ ಸಾಧ್ಯವಾಗಿಸುವುದಾದರೆ ಅದೇ ನಿಜವಾದ ಸಾಹಿತ್ಯ ಮತ್ತು ಮಾನವೀಯತೆ ಎಂದರು.
ಕಾಲದ ಜತೆಗೆ ಬದುಕಬೇಕು. ಬೆಳವಣಿಗೆಗಳಿಗೆ ಮುಖಾಮುಖಿಯಾಗಬೇಕು. ಅನುಸಂಧಾನ ನಡೆಯಬೇಕು. ಆಗ ಮಾತ್ರ ಚಲನಶೀಲ ಮತ್ತು ಸೃಜನಶೀಲ ಕೃತಿ ಕೊಡಲು ಸಾಧ್ಯ ಎಂದರು. ಬರಹಗಾರರು ಸಿದ್ಧ ಮಾದರಿ ಮೀರಿ ಬೆಳೆಯುವುದನ್ನು ಕಲಿಯಬೇಕು. ಸಿದ್ಧ ಮಾದರಿಯ ಸಂಸತಿಯ ಆಚೆಗೂ ಒಂದು ದಾರಿ ಇದೆ ಎಂಬುದನ್ನು ಕಂಡುಕೊಳ್ಳಬೇಕು. ನಮ್ಮೆದುರು ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ. ಅದರ ಹಿಂದೆ ಮತ್ತೊಂದು ಸತ್ಯ ಇದೆ ಎಂಬುದನ್ನು ಹುಡುಕಬೇಕು. ಹೀಗೆ ಸತ್ಯವನ್ನು ಹುಡುಕುವ ಸೃಜನಶೀಲತೆ ಯಾರು ಬೆಳೆಸಿಕೊಳ್ಳುತ್ತಾರೋ
ಅವರು ನಿಜವಾದ ಸಾಹಿತಿಗಳಾಗಲು ಸಾಧ್ಯ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯೆ ಬಾ.ಹ.ರಮಾಕುಮಾರಿ ಮಾತನಾಡಿ, ಹಿಂದೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಅಮ್ಮನ ಕೈಲಿತ್ತು. ಈಗ ಅಪ್ಪ ಮತ್ತು ಅಮ್ಮ ಇಬ್ಬರ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಅಪ್ಪನನ್ನು ಸ್ಮರಿಸುವ, ಅವರ
ಹೆಸರಿನಲ್ಲಿ ಪ್ರಶಸ್ತಿ ನೀಡುವ ಕಾಯಕ ಒಳ್ಳೆಯ ಬೆಳವಣಿಗೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್​.ಸಿದ್ಧಲಿಂಗಪ್ಪ ಮಾತನಾಡಿ, ಅಪ್ಪ ಪ್ರಶಸ್ತಿಗೆ ತಜ್ಞರ ಸಮಿತಿ ನೇಮಿಸುವ ಬದಲು ಓದುಗರಿಗೆ ಆಯ್ಕೆ ಸ್ವಾತಂತ್ರ ನೀಡಿರುವುದು ಅತ್ಯದ್ಬುತ ಕಾರ್ಯ. ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ಅರ್ಹರಿಗೆ ಪ್ರಶಸ್ತಿ ನೀಡುತ್ತಿರುವುದು ಮತ್ತು ಅದರ ಹಿಂದಿನ ಮಾನದಂಡ ಅತ್ಯಂತ ಖುಷಿನೀಡಿದೆ ಎಂದರು.
ಅಪ್ಪ ಪ್ರಶಸ್ತಿ ಸಂಸ್ಥಾಪಕ ಸಂಚಾಲಕ, ಸಾಹಿತಿ ಹಡವನಹಳ್ಳಿ ವೀರಣ್ಣಗೌಡ ಮಾತನಾಡಿ, ಬಹುತೇಕ ಎಲ್ಲರೂ ಅಮ್ಮನನ್ನು ಸ್ಮರಿಸಿಕೊಳ್ಳುತ್ತಾರೆ. ಅಮ್ಮಂದಿರ ದಿನ ಆಚರಿಸುತ್ತಾರೆ. ಬದಲಾದ ಕಾಲಘಟ್ಟದಲ್ಲಿ ಅಪ್ಪಂದಿರ ಜವಾಬ್ದಾರಿಯೂ ಬದಲಾಗಿದ್ದು, ಈ ಸನ್ನಿವೇಶದಲ್ಲಿ ಅಪ್ಪಂದಿರನ್ನು ಸ್ಮರಿಸುವ ಕಾರ್ಯವೂ ಆಗಬೇಕು. ಒಂದು ಕುಟುಂಬದಲ್ಲಿ ಇಬ್ಬರೂ ಸಮಾನರು ಎಂಬುದನ್ನು ಒಪ್ಪಿಕೊಳ್ಳುತ್ತಲೇ ಅಪ್ಪನ ಜವಾಬ್ದಾರಿಗಳನ್ನು ಗುರುತಿಸುವ ಹೊಣೆಗಾರಿಕೆಯೂ ಇದಾಗಿದೆ ಎಂದರು. ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ಕಳೆದ 23 ವರ್ಷಗಳಿಂದ ಸಾಂತ್ವನ ಸಲಹಾ ಕೇಂದ್ರ ನಡೆಸಿಕೊಂಡು ಬಂದಿದ್ದೇವೆ. 9400 ಪ್ರಕರಣಗಳು ಇಲ್ಲಿ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಅತ್ತೆಯಂದಿರೆ ವಿಲನ್​ ಆಗಿದ್ದಾರೆ. ಇದರ ಹಿಂದಿನ ಗುಣಗಳನ್ನು ಸೂಕ್ಷ$್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಎಲ್ಲರಲ್ಲಿಯೂ
ಎಲ್ಲರೂ ಪ್ರೀತಿ ಹುಡುಕುವ ಔದಾರ್ಯ ತೋರಬೇಕು ಎಂದರು.
ಲೇಖಕ ಡಾ.ಅಮ್ಮಸಂದ್ರ ಸುರೇಶ್​, ಬಹುಮುಖಿ ಗೆಳೆಯರ ಬಳಗದ ಸಂಚಾಲಕ ಟಿ.ಸತೀಶ್​ ಜವರೇಗೌಡ, ದಂಡಿನಶಿವರ ಮಂಜುನಾಥ್​, ಕೆ.ವಿ.ವಿವೇಕ ಹಾಗೂ ಆರ್​.ಜಿ.ಗೋಪಾಲ್​, ಎ.ಆರ್​.ರಂಗಸ್ವಾಮಿ, ಎಚ್​.ಎಂ.ವಸಂತಕುಮಾರ್​ ಇದ್ದರು.

ಪ್ರಶಸ್ತಿ ಪುರಸತರು
ನೆಲದಾಯ ಪರಿಮಳ ಕೃತಿಯ ಸ್ಮಿತ ಅಮೃತರಾಜ್​, ದೀಡೆಕೆರೆ ಜಮೀನು ಕೃತಿಯ ಮಲ್ಲಿಕಾರ್ಜುನ ಶಲ್ಲಿಕೇರಿ, ಕನ್ನಡ ನಾಟಕಗಳು ಕೃತಿಯ ಲೇಖಕ ಡಾ.ಟಿ.ವೆಂಕಟೇಶಮೂರ್ತಿ, ಟ್ರಂಕು ತಟ್ಟೆ ಕೃತಿಯ ಕತುೃರ್ ಗುರುಪ್ರಸಾದ್​ ಕಂಟಲಗೆರೆ ಅವರಿಗೆ "ಅಪ್ಪ' ಪ್ರಶಸ್ತಿ ಪ್ರದಾನ ಮಾಡಲಾಯಿತು.