ಜಿಲ್ಲೆ

ಪರಿಸರ ರಕ್ಷಣೆಗೆ ಎಲ್ಲರ ಶ್ರಮ ಅಗತ್ಯ

ಉತ್ತರ ಕನ್ನಡ ಡೆಸ್ಕ್

ನರಗುಂದ: ಪರಿಸರ ನಮ್ಮ ಮುಖ್ಯ ಅಂಗವಾಗಿದೆ. ಪರಿಸರ ರಕ್ಷಣೆಗಾಗಿ ನಾವೆಲ್ಲರೂ ವಿಶೇಷ ಶ್ರಮ ಪಡಬೇಕು. ಅಪ್ಪಿಕೋ ಚಳವಳಿ ಆರಂಭಿಸಿದ್ದ ಎಚ್.ಎನ್. ಬಹುಗುಣ ಅವರ ಆದರ್ಶಗಳ ಬಗ್ಗೆ ಗಮನ ಹರಿಸಿ, ನಾಳೆಯ ಬದುಕಿಗೋಸ್ಕರ ಅತ್ಯಧಿಕ ಗಿಡ, ಮರಗಳನ್ನು ಬೆಳೆಸಬೇಕಾಗಿದೆ ಎಂದು ಬಿಇಒ ಡಾ.ಗುರುನಾಥ ಹೂಗಾರ ಹೇಳಿದರು.

ತಾಲೂಕಿನ ಕಣಕೀಕೊಪ್ಪ ಗ್ರಾಮದ ಎನ್​ಸಿಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ, ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಹಾಗೂ ಸವೋತ್ತಮ ಪ್ರಶಸ್ತಿ ಪುರಸ್ಕೃತೆ ಪಿಡಿಒ ಕೆ.ಎಸ್. ಹಾದಿಮನಿ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ನಿಸರ್ಗದ ಪಾಲನೆ, ಸಂರಕ್ಷಣೆ ನಮ್ಮೆಲ್ಲರ ಸಂಕೇತವಾಗಬೇಕು. ಕಣಕೀಕೊಪ್ಪದ ನಿಂಗನಾಯ್ಕ ಕೊಳ್ಳಿಯವರ ಸರ್ಕಾರಿ ಶಾಲೆ ನಿರ್ವಣಕ್ಕೆ 2 ಎಕರೆ ಜಮೀನು ನೀಡಿದ್ದರಿಂದ ಸಾವಿರಾರು ಬಡ ವಿದ್ಯಾರ್ಥಿಗಳು ಶಿಕ್ಷಣ ಕಲಿಯುವಂತಾಗಿದೆ ಎಂದರು.

ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ ನರಗುಂದ ಈಶ್ವರೀಯ ವಿದ್ಯಾಲಯದಿಂದ 500 ಗಿಡಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಮುಖ್ಯ ಎಂದರು.

ಬಸವ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಬೃಹತ್ ಮಹಾ ನಗರಗಳಲ್ಲಿ ಗಿಡ ಮರಗಳನ್ನು ಕಡಿದು ವ್ಯಾಪಾರ ವಾಣಿಜ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಮನೋಧರ್ಮ ಸರಿಯಲ್ಲ ಎಂದರು.

ವಿ.ಎನ್. ಕೊಳ್ಳಿಯವರ, ಎಸ್.ಡಿ. ಕೊಳ್ಳಿಯವರ, ಐ.ಎಂ. ಹುರಕಡ್ಲಿ, ಕೆ.ಎಸ್. ಹಾದಿಮನಿ ಮಾತನಾಡಿದರು. ಎಂ.ಎಸ್. ಅಸುಂಡಿ, ರಮೇಶಗೌಡ ರಾಮನಗೌಡ್ರ, ಅರುಣಾ ವಾಳದ, ಶಿವಲೀಲಾ ಕೊಳ್ಳಿಯವರ, ವೆಂಕಮ್ಮ ಮಾದರ, ಶ್ರೀಶೈಲ ಸವದಿ, ಸುಂದರಮ್ಮ ಬಡಿಗೇರ, ಆರ್.ಎಚ್. ಹಾನಾಪೂರ, ಶಾರದಾ ನಾಶಿಶೆಟ್ರ ಉಪಸ್ಥಿತರಿದ್ದರು. ಸವಿತಾ ಕಡಿವಾಳ ನಿರ್ವಹಿಸಿದರು. ಎಸ್.ಎಲ್.ಮರಿಗೌಡ್ರ ಸ್ವಾಗತಿಸಿದರು. ಸರಿತಾ ಹಿರೇಮನಿ ವಂದಿಸಿದರು.