ಮದ್ದೂರು: ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಉತ್ತಮ ಪರಿಸರ ಇದ್ದರೆ ಮಾತ್ರ ಸಕಲ ಜೀವರಾಶಿಗಳು ನೆಮ್ಮದಿಯಿಂದಿರಲು ಸಾಧ್ಯ ಎಂಬುದನ್ನು ಮನಗಂಡು ಪ್ರತಿಯೊಬ್ಬರೂ ಪರಿಸರ ಉಳಿಸಲು ಮುಂದಾಗಬೇಕು ಎಂದು ಎಸ್.ವಿ.ಎಂ.ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಿಳಿಸಿದರು.
ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಎಸ್.ವಿ.ಎಂ.ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಪರಿಸರ ಇಲ್ಲದಿದ್ದರೆ ನಾವು ಉಸಿರಾಡುವ ಗಾಳಿಯನ್ನೂ ಕೂಡ ಹಣ ಪಡೆದು ಕೊಳ್ಳಬೇಕಾಗುತ್ತದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಹಲವು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಡುವ ಮೂಲಕ ಪರಿಸರ ಉಳಿವಿಗೆ ಮುಂದಾಗಬೇಕು ಎಂದ ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್ ಮಾತನಾಡಿ, ಎಸ್.ವಿ.ಎಂ.ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಡಳಿತ ಮಂಡಳಿ ಹಲವಾರು ವರ್ಷಗಳಿಂದ ಪರಿಸರ ದಿನಾಚರಣೆ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪರಿಸರ ಬಗ್ಗೆ ಅರಿವು ಮೂಡಿಸುವ ಜತೆಗೆ, ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಸುಮಾರು 150 ಕಿಂತ ಹೆಚ್ಚು ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ರೂಪಾ ದೇವರಾಜು, ಶಿಕ್ಷಕರಾದ ರಶ್ಮಿತಾ, ನಿಶ್ಚಿತಾ, ಮಮತಾ, ಗೀತಾ, ರಾಜೇಶ್ವರಿ, ವಿನೋದಾ, ದೀಪಿಕಾ, ಜಯವಾಣಿ , ರಂಗನಾಥ್, ಶೃತಿ ಇತರರು ಇದ್ದರು.