ಶಿಗ್ಗಾಂವಿ: ಪರಿಸರ ಉಳಿಸುವತ್ತ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಿದೆ ಎಂದು ಕೆಎಸ್ಆರ್ಪಿ ಗಂಗಿಬಾವಿಯ ಕಮಾಂಡೆಂಟ್ ಟಿ. ಸುಂದರರಾಜ್ ಹೇಳಿದರು.
ತಾಲೂಕಿನ ಗಂಗಿಬಾವಿಯ ಪೊಲೀಸ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗ್ರೋ ಗ್ರೀನ್ ಗ್ಲೋಬಲ್ ರೂರಲ್ ಡೆವಲಪ್ವೆುಂಟ್ ಸೊಸೈಟಿ ಉದ್ಘಾಟನಾ ಸಮಾರಂಭ ಮತ್ತು ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನ ಅವಿವೇಕತನದಿಂದ ನಾಶವಾಗಿರುವ ಪರಿಸರವನ್ನು ಪುನರುಜ್ಜೀವಗೊಳಿಸಬೇಕಿದೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಪರಿಸರ ನಾಶವಾಗುತ್ತದೆ. ಆಮ್ಲಜನಕದ ಕೊರತೆಯುಂಟಾಗುತ್ತದೆ. ಹಸಿರು ನಾಶವಾಗಿ ಪ್ರಾಣಿ, ಪಕ್ಷಿ ಸಂಕುಲ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.
ಅರಣ್ಯಾಧಿಕಾರಿ ಪಿ.ಆರ್. ತೆಗ್ಗಿಹಳ್ಳಿ ಮಾತನಾಡಿ, ನಮ್ಮ ದೇಶದ ಒಟ್ಟು ಭೂಭಾಗದ ಶೇ. 33ರಷ್ಟು ಅರಣ್ಯ ಇರಬೇಕು. ಆದರೆ, ಈಗ ಕೇವಲ ಶೇ. 19ರಷ್ಟಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ನೆಡುವ ಮೂಲಕ ರಾಷ್ಟ್ರೀಯ ಸಂಪತ್ತನ್ನು ರಕ್ಷಿಸಲು ಅರಣ್ಯ ಇಲಾಖೆ ಜೊತೆ ಕೈ ಜೋಡಿಸಬೇಕು ಎಂದರು.
ಸೊಸೈಟಿ ಅಧ್ಯಕ್ಷೆ ಸ್ಪೂರ್ತಿ ಜೆ.ಆರ್. ಮಾತನಾಡಿ, ನಾವು ಪ್ರತಿದಿನ ಕಾಡು ನಾಶ ಮಾಡುತ್ತ, ಪ್ಲಾಸ್ಟಿಕ್ ಬಳಕೆ ಹೆಚ್ಚಿಸುತ್ತ ಹೋದರೆ ಮುಂದಿನ ಹತ್ತು ವರ್ಷದಲ್ಲಿ ಕಾಡು ಮಾಯವಾಗಲಿದೆ. 138 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಕೇವಲ ಒಂದೊಂದು ಗಿಡ ನೆಟ್ಟರೆ ನಮ್ಮ ಭೂಮಿ ಮತ್ತೆ ಹಸಿರಾಗಿಸಬಹುದು ಎಂದರು.
ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಶಶಿಕಾಂತ ರಾಠೋಡ ಮಾತನಾಡಿದರು. ಸುಕ್ಷೇತ್ರ ಗಂಗಿಬಾವಿ ಮಠದ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ, ಡಾ. ರಾಣಿ ತಿರ್ಲಾಪುರ, ನೀರಜಾ ಎನ್. ಕಟ್ಟಿ, ಡಾ. ವಿವೇಕ ಜೈನಕೇರಿ, ಡಾ. ಮಹೇಶ ಜಗದವರ, ಡಾ. ಚೇತನಾ ಕೋಡಾವತ್, ಡಿವೈಎಸ್ಪಿ ವಿಶ್ವನಾಥ ರೆಡ್ಡಿ, ರಾಜಶೇಖರ ಪಾಟೀಲ, ಶ್ರೀಶೈಲ ತೆರದಾಳ, ಶೈಲಜಾ ಪಾಟೀಲ, ಕವಿತಾ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು. ಉದ್ಯಮಿ ನರಹರಿ ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.