ಬೆಟ್ಟದಪುರ: ದಾಸರು, ಶರಣರು, ಕವಿಗಳು, ಕನ್ನಡ ಹೋರಾಟಗಾರರು ಕಟ್ಟಿ ಬೆಳೆಸಿರುವ ಎರಡೂವರೆ ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನದು ಎಂದು ಪಿರಿಯಾಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಗೊರಳ್ಳಿ ಜಗದೀಶ್ ತಿಳಿಸಿದರು.
ಬೆಟ್ಟದಪುರ ಸೆಸ್ಕ್ ವತಿಯಿಂದ ಇಲ್ಲಿನ ಕುವೆಂಪು ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದಲ್ಲಿರುವಷ್ಟು ಮಹಾಕಾವ್ಯಗಳು, ಮಹಾಕವಿಗಳು ಜಗತ್ತಿನ ಯಾವುದೇ ಭಾಷೆಯಲ್ಲೂ ಕಾಣಸಿಗುವುದಿಲ್ಲ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಎಂಟು ಜ್ಞಾನನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದೊಡ್ಡ ಮೈಲಿಗಲ್ಲಾಗಿದ್ದು, ಅಮೋಘವರ್ಷ, ಪಂಪ, ರನ್ನ, ಜನ್ನ, ಕುಮಾರವ್ಯಾಸ, ಬಸವೇಶ್ವರ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಕನಕದಾಸರು, ಪುರಂದರ ದಾಸರು, ಕುವೆಂಪು, ಬೇಂದ್ರೆ, ಕಯ್ಯರ ಕಿಂಜ್ಙಣ್ಣ ರೈ ಮುಂತಾದ ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದರು.
ಬೆಟ್ಟದಪುರ ಆರಕ್ಷಕ ಠಾಣೆ ಸಬ್ ಇನ್‌ಸ್ಪೆಕ್ಟರ್ ಶಿವಶಂಕರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕನ್ನಡದ ನೆಲ, ಜಲ, ಭಾಷೆಗೆ ಕುಂದುಂಟಾದಾಗ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕು. ಭಾಷಾಭಿಮಾನಿಗಳಾಗಿ ಸಂಸ್ಕೃತಿ, ಸಾಹಿತ್ಯ ಬೆಳೆಸಲು ತನು, ಮನ, ಧನದ ನೆರವು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸೆಸ್ಕ್ ಎಇ ಪ್ರಶಾಂತ್ ಕುಮಾರ್, ಸಿಬ್ಬಂದಿ ರವಿ, ಹರವೇಗೌಡರು, ನವೀನ್ ಕುಮಾರ್, ಭೋಜೇಶ್, ಸಲೀಮ್, ಶೇಖರ್, ಹೇಮಂತ್, ಮಂಜು, ಮಹೇಶ್, ಶಿವಶಂಕರ್, ಸಂದೀಪ್, ಶಿವಪ್ಪ, ಶಿವಶಂಕರ, ಸುರೇಶ್ ಇತರರು ಇದ್ದರು.