ಕೆ.ಆರ್.ಪೇಟೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಲಾದ ತಾಲೂಕಿನ ಸಾಕ್ಷಿಬೀಡು ಕೆರೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಆರ್.ಟಿ.ಒ. ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿದರು. 
ಜಿಲ್ಲೆ

ಕೆರೆ-ಕಟ್ಟೆಗಳನ್ನು ಉಳಿಸಲು ಎಲ್ಲರ ಸಹಕಾರ ಅಗತ್ಯ

ಕೆ.ಆರ್.ಪೇಟೆ: ಕೆರೆಕಟ್ಟೆಗಳನ್ನು ಉಳಿಸದೆ ಇದ್ದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಹಾಗಾಗಿ ಕೆರೆ-ಕಟ್ಟೆಗಳನ್ನು ಉಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಜನಜಾಗೃತಿ ಅಧ್ಯಕ್ಷ ಆರ್.ಟಿ.ಒ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಾಕ್ಷಿಬೀಡು ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಾಕ್ಷಿಬೀಡು ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಪುನಃಶ್ಚೇತನಗೊಂಡ 779ನೇ ಕೆರೆಯ ನಾಮಫಲಕ ಅನಾವರಣಗೊಳಿಸಿ ಕೆರೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿ ಮಾತನಾಡಿ, ಕೆರೆ ಸಂರಕ್ಷಣೆಗೆ ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕಾಳಜಿ ಅನನ್ಯವಾದದು ಎಂದರು.

ನಮ್ಮ ಪೂರ್ವಜರ ಕಾಲದಲ್ಲಿ ತೆರೆದ ಬಾವಿ, ಮಗನ ಕಾಲಕ್ಕೆ ಕೊಳವೆಬಾವಿ, ಮೊಮ್ಮಕ್ಕಳ ಕಾಲಕ್ಕೆ ಖಾಲಿ ಬಾವಿ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಭೂಮಿಯಲ್ಲಿರುವ ನೀರಿನ ಪ್ರಮಾಣ ಕ್ಷೀಣಿಸಿ ಮನುಷ್ಯ ತನ್ನ ನೀರಿನ ದಾಹವನ್ನು ನೀಗಿಸಿಕೊಳ್ಳಲು ಮಾತ್ರೆಗಳನ್ನು ಬಳಸಬೇಕಾಗುತ್ತದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದರು.

ಸಮಾಜದಲ್ಲಿ ನಾವೆಲ್ಲರೂ ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ. ಇದರ ಪರಿಣಾಮ ಪ್ರಕೃತಿಯಲ್ಲಿ ಹಲವು ಬದಲಾವಣೆ ಕಾಣಬಹುದಾಗಿದೆ. ಸರ್ಕಾರಕ್ಕೆ ಸಹಕಾರಿಯಾಗಿ ಉತ್ತಮ ಕಾರ್ಯಗಳನ್ನು ಧರ್ಮಸ್ಥಳ ಯೋಜನೆ ಮಾಡುತಿದೆ. ಈ ಕೆರೆ ಕಾಮಗಾರಿಯಿಂದ ಈ ಭಾಗದ ರೈತರ ಜಮೀನುಗಳಿಗೆ ನೀರು ಹೆಚ್ಚಾಗಿ ಸಿಗುತ್ತದೆ ಮತ್ತು ಇಂತಹ ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಗಳಿಗೆ ನಮ್ಮ ಪಂಚಾಯಿತಿ ಸದಾ ಸಹಕಾರ ನೀಡುತ್ತದೆ ಎಂದರು.

ಕಾರ್ಯಕ್ರಮವನ್ನು ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಉದ್ಘಾಟಿಸಿದರು. ಸಾಕ್ಷಿಬೀಡು ಕೆರೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಮಿತಿಯ ಸರ್ವ ಸದಸ್ಯರಿಂದ ಗ್ರಾಮ ಪಂಚಾಯಿಗೆ ಕೆರೆ ಹಸ್ತಾಂತರ ಮಾಡಲಾಯಿತು.

ಜಿಲ್ಲಾ ಜನ ಜಾಗೃತಿ ಮಾಜಿ ಅಧ್ಯಕ್ಷ ಜಯರಾಮ್ ತೋಟಿ, ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ಬೀರುವಳ್ಳಿ ಗ್ರಾ.ಪಂ ಅಧ್ಯಕ್ಷೆ ಎಂ.ಜಿ ಸುಜಾತಾ ನಾಗರಾಜು, ಸದಸ್ಯ ಸಾಕ್ಷಿಬೀಡು ಎಸ್.ಎನ್.ಮಂಜೇಗೌಡ, ಕೆ.ಆರ್.ಪೇಟೆ ಯೋಜನಾಧಿಕಾರಿ ತಿಲಕ್ ರಾಜ್, ಕಿಕ್ಕೇರಿ ಯೋಜನಾಧಿಕಾರಿ ವೀರೇಶಪ್ಪ, ಕೆರೆ ಸಮಿತಿ ಅಧ್ಯಕ್ಷ ರಾಮಕೃಷ್ಣೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಕೀಲ ಎಸ್.ಆರ್. ನವೀನ್ ಕುಮಾರ್ ಇದ್ದರು.