RAICHUR 
ಜಿಲ್ಲೆ

ಡ್ರಗ್ಸ್ ಬಳಕೆ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ ಡಿಸಿ

Raichur - Reporter - Rachhai Swamy

ರಾಯಚೂರು ಯುವಜನತೆ ಸಮಾಜದ ಶಕ್ತಿಯಾಗಿದೆ. ಡ್ರಗ್ಸ್ ಬಳಕೆಯಿಂದಾಗಿ ಅವರ ಉಜ್ವಲ ಭವಿಷ್ಯ ಧ್ವಂಸವಾಗುತ್ತಿದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಕೆ. ನಿತೀಶ್ ಹೇಳಿದರು.

ನಗರದ ನವೋದಯ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಯುವಜನತೆಗೆ ಡ್ರಗ್ಸನಿಂದ ಉಂಟಾಗುವ ಹಾನಿಗಳ ಕುರಿತು ಅರಿವು ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನವೋದಯ ಮೆಡಿಕಲ್ ಕಾಲೇಜ್ ವತಿಯಿಂದ ಮಂಗಳವಾರ ಡ್ರಗ್ಸ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಮಾಜದ ರಕ್ಷಣೆಗೆ ಇಂಥ ಜಾಗೃತಿ ಅವಶ್ಯಕವಾಗಿದೆ. ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕವಾಗಿ ಕೂಡಾ ವ್ಯಕ್ತಿಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಅಲ್ಲದೆ ಮಕ್ಕಳನ್ನು ಸೂಕ್ತ ಮಾರ್ಗದಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಎಸ್ಪಿ ಎಂ.ಪುಟ್ಟಮಾದಯ್ಯ ಮಾತನಾಡಿ, ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್, ಗಾಂಜಾ, ಅಫೀಮ್ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಹಾಳಾಗುತ್ತದೆ. ಆರೋಗ್ಯ ಹಾಳಾದರೆ ಸಮಾಜವು ಹಾಳಾಗುತ್ತದೆ. ಸಮಾಜವು ಹಾಳಾಗಲು ಅವಕಾಶ ನೀಡದೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರದೊಂದಿಗೆ ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಬೇಕೆಂದು ಹೇಳಿದರು. ಡ್ರಗ್ಸ್ ವಿರುದ್ಧ 9 ಪ್ರಕರಣ ದಾಖಲಾಗಿದ್ದು, ಅಕ್ರಮ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರ ದಾಳಿ ನಡೆಸಲಾಗುತ್ತದೆ.

ಮಾದಕ ವಸ್ತುಗಳ ಸಾಗಣೆ ಕುರಿತು ಮಾಹಿತಿ ದೊರಕಿದ್ದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಡ್ರಗ್ ನಿಯಂತ್ರಣಾಧಿಕಾರಿ ಉದಯ ಕಿಶೋರ್, ಎಸ್ಪಿ ಜಿ.ಹರೀಶ್, ನವೋದಯ ರಿಜಿಸ್ಟ್ರಾರ ಡಾ.ಟಿ. ಶ್ರೀನಿವಾಸ್ , ಕಾಲೇಜಿನ ಪ್ರಾಂಶುಪಾಲ ಡಾ.ಬಿ.ದೇವನಂದ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.