ರಾಯಚೂರು ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿ ಅರಿತು, ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬ ಆಶಯ ಹೊಂದಿ. ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಯೊಂದಿಗೆ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದೇನೆಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಛಯದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯು ವಿವಿಧ ಭಾಷೆ ಮಾತನಾಡುವ, ವಿಭಿನ್ನ ಸಂಸ್ಕೃತಿ ಆಚರಣೆಯ ಸಮ್ಮಿಲನದ ವಿಶೇಷತೆ ಹೊಂದಿದೆ. ಈ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂಬುದು ಈ ವಿಶ್ವವಿದ್ಯಾಲಯದ ಗುರಿ ಮತ್ತು ನಮ್ಮ ಆಶಯವಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ವಿಷಯ ಮತ್ತು ಸಂವಹನ ಕೌಶಲ್ಯ ಸುಧಾರಿಸಲು ವಿಶ್ವವಿದ್ಯಾಲಯದಲ್ಲಿ ನಿಯಮಿತವಾಗಿ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಶೇಷ ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಈ ವಿಶ್ವವಿದ್ಯಾಲಯಕ್ಕೆ 31 ಬೋಧಕ ಹುದ್ದೆಗಳನ್ನು ಮಂಜೂರಿ ಮಾಡಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಮತ್ತು ವಿಶ್ವವಿದ್ಯಾಲಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ವಿಶ್ವವಿದ್ಯಾಲಯವು ಡಿಜಿಟಲ್ ಮೌಲ್ಯಮಾಪನ ಪ್ರಾರಂಭಿಸಿದೆ. ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಸರ್ಕಾರವು 15 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ.
ವಿಶ್ವವಿದ್ಯಾಲಯ ಆವರಣದಲ್ಲಿರುವ ಮಾನವ ಜೀನೋಮ್ ಕೇಂದ್ರಕ್ಕೆ ಕೆಕೆಆರ್‌ಡಿಬಿ ನಿಧಿಯಡಿಯಲ್ಲಿ ಸರ್ಕಾರವು 47.00 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಕೆಆರ್‌ಡಿಬಿ ನಿಧಿಯಡಿಯಲ್ಲಿ ಸರ್ಕಾರ 34 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ ಎಂದರು. ಈ ಹಿಂದೆ ನಡೆದ ಭಾಹ್ಯ ಪರೀಕ್ಷೆಗಳ ಕುರಿತು ತನಿಖೆ ನಡೆಯುತ್ತಿದ್ದು,ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕುಲಸಚಿವ ಡಾ.ಎ.ಚನ್ನಪ್ಪ, ಹಂಗಾಮಿ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ,ಮೌಲ್ಯ ಮಾಪನ ಕುಲಸಚಿವ ಡಾ.ದಮ್ಮ ಜ್ಯೋತಿ ಪ್ರಕಾಶ, ಆಡಳಿತ ಅಧಿಕಾರಿ ಡಾ.ಕೆ.ವೆಂಕಟೇಶ ಇದ್ದರು.