ಜಿಲ್ಲೆ

ಸಮಾಜದ ಅಭಿವೃದ್ಧಿಗೆ ಎಲ್ಲರ ಕೊಡುಗೆ ಬೇಕು

ಬಿಡದಿ:  ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತೀಯ ಪರಿಕಲ್ಪನೆ ಅಡಿಯಲ್ಲಿ ಸಮುದಾಯದ ಸರ್ವಾಂಗೀಣ  ಅಭಿವೃದ್ಧಿಗಾಗಿ ಪ್ರಗತಿಪರ ಸಮಾಜ ಕಾರ್ಯ ಕೊಡುಗೆ ಅತ್ಯವಶ್ಯಕವಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿಯವರು ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವತಿಯಿಂದ ಅರಳಾಳಸಂದ್ರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಶಿಬಿರ ಅನುಬಂಧ-2024 ಆರು ದಿನಗಳ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದ ಅವರು ಸಾಮಾಜಿಕ ಆರ್ಥಿಕ ಪ್ರಗತಿ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಸುಸ್ಥಿರ ಅಭಿವೃದ್ಧಿಯ ಕಡೆಗೆ ಅನೇಕ ಯೋಜನೆಗಳು ಕಾರ್ಯಕ್ರಮಗಳು ಜಗತಿನಾದ್ಯಂತ ಪ್ರಯತ್ನಗಳು ನಡೆದಿದ್ದು, ಈ ನಿಟ್ಟಿನಲ್ಲಿ ವೃತ್ತಿಪರ ಸಮಾಜಕಾರ್ಯ ಹಲವಾರು ವೈಶಿಷ್ಟ್ಯತೆ, ಸೈದಾಂತಿಕ ಹಾಗೂ ಪ್ರಾಯೋಗಿಕ ಕಲಿಕೆಗಳ ಮೂಲಕ ವಿಶೇಷ  ಜ್ಞಾನ ಹಾಗೂ ಕೌಶಲ್ಯಗಳನ್ನು ಅಳವಡಿಸಿಕೊಂಡು. ಗ್ರಾಮೀಣ ಸಮುದಾಯದೊಂದಿಗೆ ಬೆರೆತು ಹಲವಾರು ವಿಚಾರಗಳ ಬಗ್ಗೆ ಅರಿವು ಜಾಗೃತಿ ಹಾಗೂ ಚಿಂತನಾಮಂಥನಗಳನ್ನು ನಡೆಸಿ ವೃತ್ತಿಪರ ಸಮಾಜ ಕಾರ್ಯಕರ್ತರ ಪಾತ್ರ ಹಾಗೂ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಡಾ. ಸುರೇಶ್ ರೇಣುಕಪ್ಪ ಹಳ್ಳಿಯಲ್ಲಿರುವ ಸಮುದಾಯದ ಕೆಲವು ಕೌಶಲ್ಯಗಳು ನಗರ ಸಮುದಾಯದಲ್ಲಿ ಕೂಡ ಕೆಲವೊಮ್ಮೆ ಕಂಡುಬರುವುದಿಲ್ಲ ಎಂಬುದನ್ನು ಒತ್ತಿ ಹೇಳಿದರು. ಪ್ರಸ್ತುತ ವಿಶ್ವಸಂಸ್ಥೆಯ ಅನೇಕ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಮುದಾಯ ಅಭಿವೃದ್ಧಿಯು ಮಹತ್ವವನ್ನು ಪಡೆದುಕೊಂಡಿವೆ. ಮಾದರಿ ಗ್ರಾಮ ನಿರ್ಮಾಣದ ಕಡೆಗೆ ಬಹುಪಯೋಗಿ ಕಾರ್ಯಕ್ರಮಗಳು ಜಗತಿನಾದ್ಯಂತ ಅನುನಗೊಳ್ಳುತ್ತಿದ್ದು ಇಂತಹ ಸಮಾಜ ಕಾರ್ಯ ಗ್ರಾಮೀಣ ಶಿಬಿರಗಳು ಬದಲಾದ ಸನ್ನಿವೇಶದಲ್ಲಿ ಸಾಮಾಜಿಕ ನೀತಿಗಳನ್ನು ರೂಪಿಸಿ ಪ್ರಸ್ತುತ ಸಮಸ್ಯೆಗಳಿಗೆ ಸ್ಪಂದಿಸಲು ನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ವಿಶ್ವವಿದ್ಯಾಲಯಗಳು ಪ್ರಯೋಜನ ಕಾರ್ಯಕ್ರಮಗಳ ನಡೆಸಲು ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ರಾಮನಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಮಾತನಾಡಿ ತಮ್ಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳುತ್ತಿರುವ ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು ಎಳೆ ಎಳೆಯಾಗಿ ವಿವರಿಸಿ ಅರುಳಸಂದ್ರ ಗ್ರಾಮದಲ್ಲಿ ಪಂಚಾಯಿತಿಯ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಗ್ರಾಮಸ್ಥರು ಸಮರ್ಪಕವಾಗಿ ಇವುಗಳ ಪ್ರಯೋಜನ ಪಡೆದದುಕೊಂಡು ತಮ್ಮ ಸಾಮಾಜಿಕ ಆರ್ಥಿಕ ಪ್ರಗತಿಯನ್ನು ಉತ್ತಮಪಡಿಸಿಕೊಳ್ಳುವುದರ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತರು, ಸ್ವಸಹ ಗುಂಪುಗಳ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.