ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರು ಚುನಾವಣೆಯಲ್ಲಿ ಭಾಗವಹಿಸಿ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೃದ್ಧಿಯ ಬೆಳಕು ಹೆಚ್ಚಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.
ಮತದಾರರ ಜಾಗೃತಿ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಪಂಜಿನೊಂದಿಕೆ ಯುವ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ನಮ್ಮ ಹೆಮ್ಮೆ. ಅದು ನಮ್ಮ ಅಭಿಮಾನದ ಸಂಕೇತ. ನಮ್ಮ ಸಂವಿದಾನ ನೀಡಿರುವ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಪ್ರತಿಯೊಬ್ಬರು ಚಲಾಯಿಸುವ ಮತ ದೇಶದ ಅಭಿವೃದ್ಧಿ, ಸ್ಥಿರತೆ ಮತ್ತು ಸಮೃದ್ಧಿ ಹೆಚ್ಚಿಸುತ್ತದೆ. ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಸಮೂಹ ಮತ್ತು ಯುವ ಪಡೆ ಮತದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲೆಯ ಮತದಾನ ಹೆಚ್ಚಳಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸುಶಿತರ ಜಿಲ್ಲೆಯಲ್ಲಿ ಮತದಾನ ಕಡಿಮೆ ಆಗಬಾರದು. ಮತದಾನ ಹೆಚ್ಚಳಕ್ಕೆ ಜಿಲ್ಲೆಯ ಎಲ್ಲರೂ ಶ್ರಮಿಸಬೇಕು.ಮತದಾನ ಜಾಗೃತಿಗೆ ವಿವಿಧ ಚಟುವಟಿಕೆಗಳಿಂದ ಅರಿವು ಮೂಡಿಸಲಾಗಿದೆ ಎಂದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿದರು. ಜಿಲ್ಲಾ ಸ್ವೀಪ ಐಕಾನ್ ಜ್ಯೋತಿ ಸಣ್ಣಕ್ಕಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧೀನದ ಮೆಟ್ರಿಕ್ ನಂತರದ ವಿವಿಧ ವೃತ್ತಿಪರ, ಪದವಿ ವಿದ್ಯಾಥಿರ್ನಿಲಯಗಳ ವಿದ್ಯಾಥಿರ್ಗಳು, ಇತರರು ಭಾಗವಹಿಸಿದ್ದರು.
ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಮತದಾನ ಜಾಗೃತಿ ಘೋಷಣೆಗಳೊಂದಿಗೆ ಆರಂಭವಾದ ಪಂಜಿನ ಮೆರವಣಿಗೆ ಜಾಥಾ ಸುಭಾಷ ರಸ್ತೆ, ವಿವೇಕಾನಂದ ವೃತ್ತ, ಹಳೇ ಬಸ್ ನಿಲ್ದಾಣ, ಆಲೂರು ವೆಂಕಟರಾವ ವೃತ್ತ ಮಾರ್ಗವಾಗಿ ಪಾಲಿಕೆ ಆವರಣದಲ್ಲಿ ಮುಕ್ತಾಯಗೊಂಡಿತು.
ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿದರು. ಗೋಪಾಲ ಲಮಾಣಿ ನಿರೂಪಿಸಿದರು. ಶುಭಾ ಪಿ. ವಂದಿಸಿದರು.