ಸಂಡೂರು: ಯುವ ಮತದಾರರು ಯಾವುದೇ ಅಂಜಿಕೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಬೇಕು ಎಂದು ಸಂಡೂರು ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಕೆ.ಎಚ್.ಸತೀಶ ಹೇಳಿದರು.
ಲೋಕಸಭೆ ಚುನಾವಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಸಂಡೂರು ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಸಂಡೂರಿನ ಎಪಿಎಂಸಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವೋಟರ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಪಟುಗಳು ಕಡ್ಡಾಯವಾಗಿ ಮತ ಚಲಾಯಿಸಬೇಕು ಹಾಗೂ ತಮ್ಮ ಸುತ್ತಲಿನ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ 8 ತಂಡಗಳು ನೋಂದಣಿ ಮಾಡಿಕೊಂಡಿದ್ದವು. ಡಿ.ಇ.ಒ ಸಂಡೂರು ತಂಡ
ಪ್ರಥಮ ಸ್ಥಾನಗಳಿಸಿ ಕಪ್ ಹಾಗೂ 2500 ರೂ.ಪಡೆದುಕೊಂಡಿತು.
ಜಿಪಿಟಿ ಶಿಕ್ಷಕರ ತಂಡ ದ್ವಿತೀಯ ಪಡೆದು ಕಪ್ ಹಾಗೂ 1,500 ರೂ. ಪಡೆದುಕೊಂಡಿತು. ಮ್ಯಾನ್ ಆಫ್ ದಿ ಸಿರೀಸ್ ಅನ್ನು ಸಂಡೂರಿನ ಖಾಜಾ ಅವರು ಪಡೆದುಕೊಂಡರು.
ಬಳಿಕ ಸಹಿ ಸಂಗ್ರಹಣೆ, ಸೆಲ್ಫಿ ಬೂತ್‌ಗಳಲ್ಲಿ ಭಾವಚಿತ್ರ ತೆಗೆಸಿಕೊಳ್ಳುವುದರ ಮೂಲಕ ಯುವಕರು ನಮ್ಮ ದೇಶದ ಚುನಾವಣೆ ನಮ್ಮ ಹೆಮ್ಮೆ ಎಂದು ಘೋಷಣೆ ಸಾರಿದರು.
ಶಿಕ್ಷಣ ಸಂಯೋಜಕ ಬಸವರಾಜ, ಸನೌಸಂ ಅಧ್ಯಕ್ಷ ಸಿ.ಪರಶುರಾಮಪ್ಪ, ಪ್ರಾಶಾಶಿಸಂ ಅಧ್ಯಕ್ಷ ಎಲ್.ಎಚ್.ತಮ್ಮಪ್ಪ, ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಜಿ.ಕೊಟ್ರೇಶ ಇತರರಿದ್ದರು.