ಹುನಗುಂದ ಪುರಸಭೆ ಆವರಣದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನದ ಕರಪತ್ರ ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟೂರ, ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಬಿಡುಗಡೆಗೊಳಿಸಿದರು. ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ತಾಪಂ ಇಒ ತಾರಾ, ಅಂಗವಿಕಲರ ಮುಖಂಡ ಸಂಗಮೇಶ ಬಾವಿಕಟ್ಟಿ, ಪುರಸಭೆ ಸಿಬ್ಬಂದಿ ರವಿ ಹುಣಶ್ಯಾಳ ಇತರರಿದ್ದರು. 
ಜಿಲ್ಲೆ

ದೇಶದ ಭವಿಷ್ಯಕ್ಕೆ ಎಲ್ಲರೂ ಮತದಾನ ಮಾಡಿ

ಹುನಗುಂದ: ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ನನ್ನ ಮತ ಮಾರಾಟ ಮಾಡದೆ ನಮ್ಮ ಮತ್ತು ದೇಶದ ಭವಿಷ್ಯಕ್ಕೆ ನಾವೆಲ್ಲರೂ ಮತದಾನ ಮಾಡಬೇಕೆಂದು ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟೂರ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ಸಹಯೋಗದಲ್ಲಿ ಮಂಗಳವಾರ ನಡೆದ ಮತದಾನ ಜಾಗೃತಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯಾವುದೇ ಆಮಿಷಕ್ಕೆ ಜನರು ಒಳಗಾಗದೆ ಯೋಚಿಸಿ ಮತ ಹಾಕಬೇಕು. ವಿವೇಚನೆಯಿಂದ ಮತ ಹಾಕಿದರೆ ದೇಶದ ಜನರಿಗೆ ಹಿತವಾದಂತೆ, ಮತದಾನದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತರೆ ದೇಶ ತಾನಾಗಿಯೇ ಮುನ್ನಡೆಯುತ್ತದೆ ಎಂದು ತಿಳಿಸಿದರು.

ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿ, ನೆರೆಹೊರೆಯವರನ್ನು ಕರೆತಂದು ಮತದಾನ ಮಾಡಿಸುವ ಶ್ರಮದಾನದಿಂದ ನಾವು ಹೊಸ ಮನಸ್ಸಿನೊಂದಿಗೆ ಸದೃಢ ದೇಶ ಕಟ್ಟೋಣ ಎಂದರು.

ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ಮಾತನಾಡಿ, ಎಲ್ಲರೂ ಮತದಾನ ಕೇಂದ್ರದ ಕಡೆಗೆ ಹೊರಡಿ, ಮತದಾನದ ಅವಕಾಶದ ಜಾಣ್ಮೆಯಿಂದ ಬಟನ್ ಒತ್ತುವ ಮೂಲಕ ಯೋಗ್ಯರಿಗೆ ಮತ ನೀಡೋಣ ಎಂದರು.

ಪುರಸಭೆಯಿಂದ ಜಾಗೃತಿ ಜಾಥಾ ಪಟ್ಟಣದ ವಿಜಯ ಮಹಾಂತೇಶ ಶಾಲೆ, ಚನ್ನಮ್ಮ ವೃತ್ತ, ವಿ.ಮ. ಬ್ಯಾಂಕ್ ಮೂಲಕ ವಿಜಯಮಹಾಂತೇಶ ವೃತ್ತಕ್ಕೆ ತೆರಳಿ ಅಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ತಾಪಂ ಇಒ ತಾರಾ, ಅಂಗವಿಕಲರ ಮುಖಂಡ ಸಂಗಮೇಶ ಬಾವಿಕಟ್ಟಿ, ಪುರಸಭೆ ಸಿಬ್ಬಂದಿ ರವಿ ಹುಣಶ್ಯಾಳ, ಮಹಾಂತೇಶ ತಾರಿವಾಳ, ಬಾಬು ಲೈನ್, ರಜಾಕ್ ಲೈನ್ ಮತ್ತು ಪೌರ ಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.