ಹೊಸಕೋಟೆಯ ಬೆಸ್ಕಾಂನಿಂದ ಹಮ್ಮಿಕೊಂಡಿದ್ದ ವಿದ್ಯುತ್​ ಜಾಗೃತಿ ಕಾರ್ಯಕ್ರಮದಲ್ಲಿ ನಗರದ ಬೀದಿ ಬೀದಿಗಳಲ್ಲಿ ಸಂಚರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಬೆಸ್ಕಾಂನ ಎಇಇ ಪುಟ್ಟಸ್ವಾಮಿ, ಬೆಸ್ಕಾಂ ಇಲಾಖೆ ಸಿಬ್ಬಂದಿ ಹಾಗೂ ಗುತ್ತಿಗೆದಾರರು ಇದ್ದರು. 
ಜಿಲ್ಲೆ

ವಿದ್ಯುತ್​ ತಂತಿಗಳಿಂದ ಎಲ್ಲರೂ ದೂರವಿರಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ : ಪ್ರತಿಯೊಬ್ಬರಿಗೂ ವಿದ್ಯುತ್​ ಅತ್ಯವಶ್ಯಕ. ಆದರೆ ವಿದ್ಯುತ್​ ಪ್ರಯೋಜನ ಪಡೆಯಬಹುದೇ ಹೊರತು ಅದನ್ನು ಮುಟ್ಟಿ ಬಲವಂತದ ಬಳಕೆ ಮಾಡುವುದು ನಿಷೇದ ಎಂದು ಬೆಸ್ಕಾಂನ ಎಇಇ ಪುಟ್ಟಸ್ವಾಮಿ ತಿಳಿಸಿದರು.

ಬೆಸ್ಕಾಂನಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯುತ್​ ಸುರಕ್ಷತೆ ಬಗ್ಗೆ ಎಲ್ಲರೂ ತಿಳಿಯಬೇಕು. ಮೊದಲು ವಿದ್ಯುತ್​ ತಂತಿಗಳಿಂದ ದೂರವಿರಿ, ವಿದ್ಯುತ್​ ಸ್ವಿಚ್​ ಹಾಗೂ ವಿದ್ಯುತ್​ ಉಪಕರಣಗಳನ್ನು ಮಕ್ಕಳಿಂದ ದೂರವಿಡಿ. ಮನೆಯಲ್ಲಿ ಬಳಸುವ ಯಾವುದೇ ವಿದ್ಯುತ್​ ಚಾಲಿತ ಉಪಕರಣಗಳಿಗೆ ಮೂರು ಪಿನ್​ಗಳ ಸಾಕೆಟ್​/ಪ್ಲಗ್​ಗಳನ್ನು ಬಳಸಿ. ಮನೆಯ ವಿದ್ಯುತ್​ ಸಂಪರ್ಕದ ವೈರಿಂಗ್​ ಕೆಲಸಗಳನ್ನು ಸರ್ಕಾರಿ ಲೈಸನ್ಸ್​ ಹೊಂದಿದ ವಿದ್ಯುತ್​ ಗುತ್ತಿಗೆದಾರರಿಂದ ಮಾಡಿಸಿ. ಮನೆ ಅಥವಾ ಯಾವುದೇ ವಿದ್ಯುತ್​ ಸಂಪರ್ಕ ಪಡೆಯುವಾಗ ಗ್ರೌಂಡಿಂಗ್​ ವ್ಯವಸ್ಥೆ ಮಾಡಿದೆಯೇ ಎಂದು ಪರಿಶೀಲಿಸಿ. ವಿದ್ಯುತ್​ ಸಂಪರ್ಕಕ್ಕೆ ಬೇಕಾದ ಎಲ್ಲ ಉಪಕರಣಗಳನ್ನು ಐಎಸ್​ಐ ಪ್ರಮಾಣ ಪತ್ರ ಇದೆಯೇ ಎಂದು ಪರಿಶೀಲಿಸಿ. ಯಾವುದೇ ಕಾರಣಕ್ಕೂ ಕಟ್ಟಡಗಳನ್ನು ವಿದ್ಯುತ್​ ತಂತಿಗಳ ಸಮೀಪ ನಿರ್ಮಿಸಬೇಡಿ ಎಂದರು.

ತುಂಡಾಗಿರುವ ವಿದ್ಯುತ್​ ತಂತಿಗಳನ್ನು ಮುಟ್ಟಬೇಡಿ, ವಿದ್ಯುತ್​ ಸ್ವಿಚ್​ ಹಾಗೂ ಉಪಕರಣಗಳನ್ನು ಒದ್ದೆಯ ಕೈಗಳಿಂದ ಮುಟ್ಟಬೇಡಿ, ವಿದ್ಯುತ್​ ಕಂಬಗಳಿಗೆ ಬ್ಯಾನರ್​ ಅಥವಾ ಜಾಹೀರಾತು ಲಕ ಕಟ್ಟಬೇಡಿ, ವಿದ್ಯುತ್​ ಕಂಬಗಳಿಗೆ ತಂತಿ ಕಟ್ಟಿ ಒದ್ದೆ ಬಟ್ಟೆಗಳನ್ನು ಒಣಹಾಕಬೇಡಿ. ವಿದ್ಯುತ್​ ಕಂಬಗಳಿಂದ ಅಕ್ರಮ ಸಂಪರ್ಕ ಪಡೆಯಬೇಡಿ ಎಂದು ಸಾರ್ವಜನಿಕರಿಗೆ ಅರಿವಿ ಮೂಡಿಸುವ ಸೈನ್​ ಬೋರ್ಡ್​ಗಳನ್ನು ಪ್ರದರ್ಶನ ಮಾಡುತ್ತಾ ಇಂದು ನಗರದಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು ಎಂದು ಹೇಳಿದರು.