ಮಡಿಕೇರಿ: ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪ್ರಭಾರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಬಿ.ಪರಮೇಶ್ವರ ಪ್ರಸನ್ನ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಸಂಘಟನೆಯ ಇಕೋ ಕ್ಲಬ್‌ಗಳು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಗಾಂಧಿ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಸರ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.
ತಾಯಿ ಮಾತೆ, ಪ್ರಕೃತಿ ಮಾತೆ, ದೇಶ ಮಾತೆ ಎಂಬುದನ್ನು ಯಾರೂ ಸಹ ಮರೆಯಬಾರದು, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ ಎಂಬುದನ್ನು ತಿಳಿದುಕೊಳ್ಳಬೇಕು. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು, ಪ್ರಕೃತಿ ಕೇಂದ್ರಗಳು ಹಾಗೂ ಬೆಟ್ಟಗುಡ್ಡಗಳಲ್ಲಿ ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಯೂಸ್ ಅಂಡ್ ತ್ರೋ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪ್ರತಿ ಜೀವಿಗೂ ತೊಂದರೆ. ಭೂಮಿಗೆ ೨೦ ಲಕ್ಷ ದಷ್ಟು ಪ್ಲಾಸ್ಟಿಕ್ ಬಾಟಲ್ ಬಿಸಾಕಲಾಗುತ್ತಿದೆ. ಇದು ನದಿ, ಹಳ್ಳಕೊಳ್ಳ, ಸೇರುತ್ತದೆ. ಇದರಿಂದ ಹಲವು ತೊಂದರೆಗೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ನಾವು ನಮ್ಮ ನೆಲ-ಜಲ, ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಲವು ಶತಮಾನಗಳಿಂದ ಪೂರ್ವಿಕರು ಪರಿಸರ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ಪರಿಸರ ದಿನವು ಒಂದು ದಿನಕ್ಕೆ ಸೀಮಿತವಲ್ಲ. ಇದನ್ನು ನಿರಂತರವಾಗಿ ಇರಬೇಕು. ವಿದ್ಯಾರ್ಥಿಗಳು ಪರಿಸರ ರಾಯಭಾರಿಗಳಾಗಿ ಕೆಲಸ ನಿರ್ವಹಿಸಬೇಕು ಎಂದರು.
ಮಡಿಕೇರಿಯು ಶುದ್ಧ ಪರಿಸರ ಹೊಂದಿರುವ ನಗರವಾಗಿ ಹೆಸರಾಗಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿ, ನಾವು ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ವಸ್ತುಗಳ ಬಟ್ಟೆ ವಸ್ತುಗಳನ್ನು ಬಳಸುವಂತಾಗಬೇಕು. ಕಸದ ನಿರ್ವಹಣೆ ಮನೆಯಿಂದಲೇ ಆರಂಭವಾಗಬೇಕು. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸುವ ಮೂಲಕ ಮಾಲಿನ್ಯವನ್ನು ತಡೆಯಬೇಕು. ವಿದ್ಯಾರ್ಥಿಗಳು ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಸ್ವಚ್ಛ ಪರಿಸರವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.
ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದೇ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು. ನಾವು ನೆಟ್ಟ ಗಿಡವನ್ನು ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾತನಾಡಿ, ಸುಸ್ಥಿರ ಪರಿಸರ ಸಂರಕ್ಷಣೆ ಮಾಡುವುದು, ಪ್ರಕೃತಿಯನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ತಡೆಗಟ್ಟಿ ಕೊನೆಗೊಳಿಸುವುದು ಬಹಳ ಮುಖ್ಯ ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ಕೌಟ್ಸ್‌ನ ಆಯುಕ್ತ ಜಿಮ್ಮಿ ಸಿಕ್ವೇರಾ, ಪರಿಸರ ಸಂರಕ್ಷಣೆ ಕುರಿತು ಪರಿಸರ ಅಧಿಕಾರಿ ಎಂ.ಜಿ.ರಘುರಾಮ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ, ಪೌರಾಯುಕ್ತರಾದ ಎಚ್.ಆರ್.ರಮೇಶ್ ಇತರರಿದ್ದರು.