ಮೈಸೂರು: ದೇಶದ ಪ್ರತಿಯೊಂದು ಜನರ ಶ್ರೇಯೋಭಿವೃದ್ಧಿಗೆ ಚಿಂಚಿಸುವ ದಾಖಲೆಯೇ ‘ಸಂವಿಧಾನ’. ಹಾಗಾಗಿ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿಯಬೇಕು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಕೆ.ಪುಟ್ಟಸ್ವಾಮಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸದಲ್ಲಿ ‘ಸಾಂವಿಧಾನಿಕ ಮೌಲ್ಯಗಳು’ ವಿಷಯದ ಕುರಿತು ಮಾತನಾಡಿ, ಸಂವಿಧಾನ ನಮ್ಮ ಬದುಕಿನಷ್ಟು, ವಿಶ್ವದಷ್ಟು ವಿಶಾಲವಾದದ್ದು. ಅದರ ಆಳ ಮತ್ತು ಅಗಲ ಅರಿತರೆ ಮಾತ್ರ ನಾವು ಸಂವಿಧಾನಾತ್ಮಕವಾಗಿ ಬದುಕಲು ಸಾಧ್ಯ. ಪ್ರತಿಯೊಬ್ಬ ಭಾರತೀಯರು ಸಂವಿಧಾನವನ್ನು ಅರಿಯಬೇಕು. ಸಂವಿಧಾನವನ್ನು ಓದಿ ಅದರ ಮೌಲ್ಯಗಳನ್ನು ಅರಿತರೆ ನಾವು ಎಷ್ಟು ದೊಡ್ಡವರು, ನಮ್ಮ ದೇಶ ಎಷ್ಟು ದೊಡ್ಡದು ಎಂಬ ಅರಿವು ನಮಗೆ ಆಗುತ್ತದೆ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಿನ್ನವಾದ ಭಾಷೆ, ಸಂಸ್ಕೃತಿಯನ್ನು ಕಾಣಬಹುದು. ಕರ್ನಾಟಕದಲ್ಲಿ ಕನ್ನಡಿಗರನ್ನು, ತಮಿಳುನಾಡಿನಲ್ಲಿ ತಮಿಳರನ್ನು, ಕೇರಳದಲ್ಲಿ ಮಲೆಯಾಳಿ, ಮಹಾರಾಷ್ಟ್ರದಲ್ಲಿ ಮರಾಠಿಗರನ್ನು ಕಾಣಬಹುದು. ವೈವಿಧ್ಯ ಭಾಷೆ, ಸಂಸ್ಕೃತಿಯ ಕಾರಣಕ್ಕೆ ಬಹುತೇಕರು ಭಾರತೀಯರು ಎಂದು ಹೇಳಿಕೊಳ್ಳುವುದಿಲ್ಲ. ನಾವು ಕನ್ನಡಿಗರು, ತಮಿಳರು, ಮಲೆಯಾಳಿ, ಮರಾಠಿಗರು ಎಂದು ಹೇಳಿಕೊಳ್ಳದೆ ಭಾರತೀಯರು ಎಂದು ಹೇಳಿಕೊಂಡರೆ ನಾವು ದೇಶದಷ್ಟೇ ಎತ್ತರಕ್ಕೆ ಬೆಳೆಯುತ್ತೇವೆ ಎಂದರು.
ವಿದ್ಯಾವರ್ಧಕ ಸಂಘ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಕಾನೂನು ಕಾಲೇಜಿನ ಅಧ್ಯಕ್ಷ ಎಸ್. ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ.ಪಿ.ದೀಪು, ಕಾರ್ಯಕ್ರಮ ಸಂಯೋಜಕ ಎಚ್.ಎಸ್. ಶಿವಕುಮಾರ, ಕೆ.ಪುಟ್ಟಸ್ವಾಮಿ ಪುತ್ರ ಚಂದ್ರಶೇಖರ್ ಇದ್ದರು.