ಜಿಲ್ಲೆ

ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಿರಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ತಿಳಿಸಿದರು.


ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಗುರುವಾರ ಏರ್ಪಡಿಸಿದ್ದ ಸೈಕಲ್ ರ‌್ಯಾಲಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.


ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದರು. ಇವರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ. ನಾವು ಇಂದು ನೆಮ್ಮದಿಯ ಜೀವನ ನಡೆಸುತ್ತಿರುವುದು ಸಂವಿಧಾನ ನೀಡಿರುವ ಕೊಡುಗೆಯಾಗಿದೆ ಎಂದು ತಿಳಿಸಿದರು.


ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.


ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಪಾಲಿಕೆಯ ಅಧಿಕಾರಿಗಳಾದ ಪ್ರತಿಭಾ, ಮಂಜುನಾಥ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.