ಮಡಿಕೇರಿ: ಪ್ರತಿಯೊಬ್ಬರಲ್ಲೂ ಆರೋಗ್ಯಕರ ನಗು ಇರಬೇಕೆ ಹೊರತು ನೋವಿನ ನಗು ಇರಬಾರದು ಎಂದು ಖ್ಯಾತ ಚಲನಚಿತ್ರ ನಟ ಹಾಗೂ ಹಾಸ್ಯ ಕಲಾವಿದ ಮಿಮಿಕ್ರಿ ದಯಾನಂದ್ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಕಾಲೇಜಿನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ೨೦೨೩ ರ ಪ್ರಯುಕ್ತ ಆಯೋಜಿಸಿದ್ದ ಕಲಾಸ್ಮತಿ ಕನ್ನಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಆರೋಗ್ಯಕರ ನಗು ಇರಬೇಕು. ಆದರೆ, ನೋವಿನ ನಗು ಇರಬಾರದು. ಮಹಿಳೆಯರಿಗೆ ಗೌರವ ಕೊಡಬೇಕು. ಹಸಿವು, ನೋವು ಅವಮಾನ ಎದುರಿಸಿದವರು ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡುತ್ತಾರೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ವೈದ್ಯಕೀಯ ಕಾಲೇಜಿನಲ್ಲಿ ಈ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿರುವ ಬಗ್ಗೆ ಶ್ಲಾಘನೀಯ. ಒಬ್ಬ ವ್ಯಕ್ತಿಗೆ ಹೆತ್ತ ತಾಯಿ ಯಾವ ರೀತಿ ಶ್ರೇಷ್ಠಳೊ ಅದೇ ರೀತಿಯಾಗಿ ಪ್ರತಿಯೊಬ್ಬರಿಗೂ ತನ್ನ ನೆಲ, ತನ್ನ ಭಾಷೆ ತನ್ನ ರಾಜ್ಯ ಶ್ರೇಷ್ಠವಾಗಿದೆ. ಎಲ್ಲರಿಗೂ ಗೌರವ ಕೊಡಬೇಕು. ಆಚಾರ ವಿಚಾರಗಳನ್ನು ಬಿಟ್ಟು ಕೊಡಬಾರದು. ಯಾರ ಮನಸ್ಸಿಗೂ ಗಾಯ ಮಾಡುವ ರೀತಿ ಮಾತನಾಡಬಾರದು. ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ಮಾತ್ರ ಅಲ್ಲದೆ ಈ ರಾಜ್ಯದಲ್ಲಿರುವ ಪ್ರತಿಯೊಬ್ಬರು ಕೂಡ ಸಂಭ್ರಮಿಸಬೇಕೆಂದರು.
ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾರವರು, ವೈದ್ಯಕೀಯ ಕಾಲೇಜಿನಲ್ಲಿ ದೊಡ್ಡದಾಗಿ ಕನ್ನಡ ಹಬ್ಬವನ್ನು ಆಚರಿಸಿಸುತ್ತಿರುವುದಕ್ಕೆ ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ.ಕೆ.ಬಿ.ಕಾರ್ಯಪ್ಪ ಮಾತನಾಡಿ, ಪ್ರತಿ ವರ್ಷ ಸಂಸ್ಥೆಯಲ್ಲಿ ಕನ್ನಡ ಹಬ್ಬವನ್ನು ವೈಭವದಿಂದ ಆಚರಿಸುತ್ತಾ ಬರಲಾಗುತ್ತಿದೆ. ಇದೇ ರೀತಿಯಲ್ಲಿ ಮುಂದುವರೆಯಲಿ ಹಾಗೂ ಮುಂದಿನ ಪೀಳಿಗೆಯವರಿಗೂ ಕೂಡ ಕನ್ನಡದ ಮಹತ್ವವನ್ನು ತಿಳಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಿಮಿಕ್ರಿ ದಯಾನಂದ ಅವರನ್ನು ಸನ್ಮಾನಿಸಲಾಯಿತು. ನಂತರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಫರ್ಧೆಗಳಲ್ಲಿ ವಿಜಯಿಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಂತರ ಮಿಮಿಕ್ರಿ ದಯಾನಂದ್‌ರವರು ತಮ್ಮ ಮಿಮಿಕ್ರಿ ಹಾಸ್ಯದ ಮೂಲಕ ಎಲ್ಲರನ್ನು ಹಾಸ್ಯದ ಮೂಲಕ ರಂಜಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮುಖ್ಯ ಆಡಳಿತಾಧಿಕಾರಿಗಳಾದ ಎ.ಎಲ್.ಸ್ವಾಮಿ, ಪ್ರಾಂಶುಪಾಲ ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ರೂಪೇಶ್ ಗೋಪಾಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಎನ್.ನಂಜುಂಡಯ್ಯ, ಸ್ಥಾನೀಯ ವೈದ್ಯಾಧಿಕಾರಿಗಳಾದ ವಿ.ಎಸ್.ಸತೀಶ್, ಕನ್ನದ ಸಂಘ ಸಂಚಾಲಕಾರದ ಡಾ.ಮಂಜುನಾಥ್‌ರವರು ಹಾಜರಿದ್ದರು.