ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರ, ಮಹಿಳಾ ಮತ್ತು ಯುವ ಸಮ್ಮೇಳನಕ್ಕೆ ಸಂಸದ ಡಾ.ಕೆ.ಸುಧಾಕರ್​ಚಾಲನೆ ನೀಡಿದರು. ಶಾಸಕ ಧೀರಜ್​ ಮುನಿರಾಜ್​, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ,ಕಾರ್ಯದರ್ಶಿ ವೆಂಕಟೇಶ್​, ತಾಲೂಕು ಅಧ್ಯಕ್ಷ ನಾಗೇಶ್​, ನೆಲಮಂಗಲ ತಾಲೂಕು ಅಧ್ಯಕ್ಷ ಜಗದೀಶ್​ ಚೌಧರಿ, ಮುಖಂಡರಾದ ಒಬದೇನಹಳ್ಳಿ ಮುನಿಯಪ್ಪ, ರವಿಕುಮಾರ್​, ಮಹಿಳಾ ಘಟಕ ಕಾರ್ಯಕರ್ತರು ಇದ್ದರು. 
ಜಿಲ್ಲೆ

ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನ ಬಳಕೆಗೆ ಆದ್ಯತೆ ನೀಡಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ಉತ್ಪನ್ನಗಳ ಉತ್ತೇಜನಕ್ಕೆ ನೀಡಿರುವ ಕರೆಯಂತೆ ಸ್ವದೇಶಿ ಜೀವನ ಮಂತ್ರ ಆಗಬೇಕು ಎಂದು ಸಂಸದ ಡಾ.ಕೆ.ಸುಧಾಕರ್​ ತಿಳಿಸಿದರು. ನಗರದ ಖಾಸಗಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಕಾರ್ಯಾಗಾರ, ಮಹಿಳಾ ಮತ್ತು ಯುವ ಸಮ್ಮೇಳನದಲ್ಲಿ ಆತ್ಮನಿರ್ಭರ ಭಾರತ ಸಂಕಲ್ಪದ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿ,ನಾವೆಲ್ಲರೂ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು. ಜತೆಗೆ ಸ್ವದೇಶಿ ವಸ್ತುಗಳ ಉತ್ಪಾದನೆ, ಮಾರಾಟಕ್ಕೂ ಉತ್ತೇಜನ ನೀಡಬೇಕು. ಇದರಿಂದ ಸಂಪತ್ತು ವಿದೇಶಗಳಿಗೆ ಹೋಗದಂತೆ ತಡೆಯಬಹುದು ಎಂದರು.

ಸ್ವದೇಶಿ ಸಂಶೋಧನೆ, ವಿನ್ಯಾಸ ಮತ್ತು ಉತ್ಪಾದನೆಯ ಸಂಪೂರ್ಣ ಪರಿಸರ ವ್ಯವಸ್ಥೆ ರೂಪಿಸಬೇಕು. ಬಳಸುವ ಆಹಾರ ಪದಾರ್ಥ, ಬಟ್ಟೆ, ವಾಹನ, ಯಂತ್ರೋಪಕರಣ ಎಲ್ಲವೂ ಸ್ವದೇಶಿ ಆದಾಗ ಮಾತ್ರ ವಿಕಸಿತ ಭಾರತ ನಿಮಾರ್ಣದ ಕನಸನ್ನು ಸಾಕಾರಗೊಳಿಸಲು ಸಾಧ್ಯ. ಸ್ವದೇಶಿ ವಸ್ತುಗಳ ಬಳಕೆಯ ಸಂಕಲ್ಪ ಮಾಡುವ ಮೂಲಕ ಪ್ರತಿಯೊಬ್ಬ ಭಾರತೀಯನ ಪ್ರಗತಿಗೆ ಕೈಜೋಡಿಸೋಣ ಎಂದರು. ಶಾಸಕ ಧೀರಜ್​ ಮುನಿರಾಜು ಮಾತನಾಡಿ, ಎಲ್ಲ ರಂಗದಲ್ಲೂ ದೇಶ ಅಭಿವೃದ್ಧಿ ಹೊಂದಲು ಇದು ಸಹಕಾರಿಯಾಗುತ್ತದೆ. ದೇಶದಲ್ಲಿಯೇ ಸಾಕಷ್ಟು ಉತ್ತಮ ವಸ್ತುಗಳ ಉತ್ಪಾದನೆ ಆಗುತ್ತಿದೆ. ಅದರ ಉತ್ಪಾದನೆಗೆ ಆದ್ಯತೆ ನೀಡುವ ಜತೆಗೆ ಅದರ ಬಳಕೆ, ಮಾರಾಟಕ್ಕೆ ಒತ್ತು ನೀಡಬೇಕು. ದೇಶದ ಅಭಿವೃದ್ಧಿಯಲ್ಲಿ ಸ್ವದೇಶಿ ವಸ್ತುಗಳು, ಉದ್ಯಮಗಳ ಬೆಳವಣಿಗೆ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತದ ಆಶಯ ನೆರವೇರಿಸಲು ಕೈಜೋಡಿಸಬೇಕು ಎಂದರು.