ಹೊಸಪೇಟೆ: ಮನುಷ್ಯ ಸರಾಗವಾಗಿ ಜೀವನ ನಡೆಸಲು ಕಣ್ಣುಗಳು ಸಹಕಾರಿ. ಹೊರಗಿನ ಜಗತ್ತಿಗೆ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತವೆ ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಇದನ್ನೂ ಓದಿ:ಕಣ್ಣಿನ ಉಚಿತ ತಪಾಸಣೆ ಶಿಬಿರ
ನಗರದ ಚಿತ್ತವಾಡ್ಗಿ ಶಾದಿಮಹಲ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ಜಾಮೀಯ ಮಸೀದಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷ ಸಾವಿರಾರು ಜನರು ಕುರುಡರಾಗಿ ಹುಟ್ಟುತ್ತಿದ್ದಾರೆ. ಕೆಲವರು ಆಕಸ್ಮಿಕ ಅಪಘಾತಗಳಿಂದ ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂಥವರ ಜೀವನಕ್ಕೆ ನೇತ್ರದಾನಿಗಳು ಅತ್ಯವಶ್ಯಕ. ಮರಣದ ನಂತರ ನೇತ್ರದಾನ ಮಾಡಿದರೆ ಇಬ್ಬರ ಜೀವನಕ್ಕೆ ಬೆಳಕು ನೀಡಬಹುದು. ಆದ್ದರಿಂದ ಪ್ರತಿಯೊಬ್ಬರು ನೇತ್ರದಾನಕ್ಕೆ ಪ್ರಾಮುಖ್ಯತೆ ನೀಡಿ ಎಂದರು.
ಡಾ.ಶ್ರೀನಿವಾಸ್ ದೇಶ ಪಾಂಡೆ ಮಾತನಾಡಿ, ರಾತ್ರಿ ವೇಳೆ ಅನಾವಶ್ಯಕವಾಗಿ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ನೋಡಿದರೆ ದೃಷ್ಠಿ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಕಣ್ಣಿನಲ್ಲಿ ಪೊರೆ ಬೆಳೆದರೆ ತಕ್ಷಣ ತಪಾಸಣೆ ಮಾಡಿಸಿ. ವೈದ್ಯರ ಸಲಹೆ ಇಲ್ಲದೇ ಔಷಧಿಗಳನ್ನು ಸೇವಿಸಬಾರದು. 40 ವರ್ಷದ ನಂತರ ಪ್ರತಿಯೊಬ್ಬರೂ ಕಣ್ಣಿನ ಒತ್ತಡ ಪರೀಕ್ಷಿಸಿಕೊಳ್ಳಬೇಕು. ಶುಗರ್ ಇದ್ದವರು ಪ್ರತಿ ವರ್ಷ ಕಣ್ಣಿನ ರೆಟಿನಾ ತಪಾಸಣೆ ಮಾಡಿಸಿ ಎಂದರು.