ಜಿಲ್ಲೆ

ಗಾಂಧೀಜಿ ಆದರ್ಶ ಪ್ರತಿಯೊಬ್ಬರೂ ಪಾಲಿಸಿರಿ: ನಗರ ಡಿಸಿ ಜಗದೀಶ್ ಕಿವಿಮಾತು

ಬೆಂಗಳೂರು: ಆಧುನಿಕ ಯುಗದಲ್ಲಿ ವಾಟ್ಸ್‌ಆ್ಯಪ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಕ್ರಿಯರಾಗಿದದ್ದರೂ, ಮಹಾತ್ಮ ಗಾಂಧೀಜಿಯವರ ಆದರ್ಶ ಪ್ರಸ್ತುತತೆ ಪಡೆದಿವೆ. ಈ ತತ್ವಗಳನ್ನು ಯುವಜನತೆ ಸಹಿತ ಎಲ್ಲರೂ ಅನುಸರಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ನಗರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 156ನೇ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಬಳಿಕ ಮಾತನಾಡಿದರು.

ಗಾಂಧೀಜಿಯವರು ದೇಶಕ್ಕಾಗಿ ನೀಡಿರುವ ಕೊಡುಗೆಯ ಬಗ್ಗೆ ಇಂದಿನ ಯುವ ಪೀಳಿಗೆಯಲ್ಲಿ ಅರಿವು ಮೂಡಿಸಲು ಸರ್ಕಾರ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಶಾಲಾ - ಕಾಲೇಜು ಮಕ್ಕಳಿಗಾಗಿ ಏರ್ಪಡಿಸಿದ್ದು, ಅದರಲ್ಲಿ ಭಾಗವಹಿಸಿ ಬಹುಮಾನ ಗೆದ್ದ ವಿದ್ಯಾರ್ಥಿಗಳು ಅಭಿನಂದನೀಯ ಎಂದರು.

ನಗರ ಜಿಲ್ಲಾ ಪಂಚಾಯಿತಿ ಸಿಇಒ ಆರ್.ಯತೀಶ್ ಮಾತನಾಡಿ, ಸರಳವಾಗಿ ಬದುಕಿದ ಬೇರೊಬ್ಬರಿಗೆ ನೋವು ಕೊಡದಂತೆ ಜೀವನ ನಡೆಸಿದ ಗಾಂಧೀಜಿ ಬದುಕು ನಮಗೆ ದಾರಿದೀಪವಾಗಿದೆ. ಅವರಲ್ಲಿದ್ದ ವಿಶಾಲ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯೇ ನಮಗೆ ಮಾರ್ಗದರ್ಶಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ ರೆಡ್ಡಿ, ವಾರ್ತಾ ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ:

ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.