ಜಿಲ್ಲೆ

ಪ್ರತಿಯೋರ್ವರು ಬದುಕನ್ನು ಆನಂದಿಸಬೇಕು: ಹರೀಶ್ ಮಾಚಯ್ಯ

ಮಡಿಕೇರಿ: ಬದುಕನ್ನು ಪ್ರತೀ ವ್ಯಕ್ತಿಯೂ ಮನಸ್ಸಾರೆ ಆನಂದಿಸಬೇಕು. ಆಗ ಅವರ ನಡುವಳಿಕೆಯಲ್ಲಿ ಶ್ರೇಷ್ಠತೆ, ಮನತೃಪ್ತಿ ಕಾಣಲು ಸಾಧ್ಯವಾಗುತ್ತದೆ ಎಂದು ಮ್ಯಾನೇಜ್ ಮೆಂಟ್ ಸಲಹೆಗಾರ ಮೈಸೂರಿನ ಕೊಡಂದೆರ ಹರೀಶ್ ಮಾಚಯ್ಯ ಹೇಳಿದರು.


ನಗರದ ಕೊಡಗು ವಿದ್ಯಾಲಯದಲ್ಲಿ ೨೦ ದಿನಗಳಿಂದ ಆಯೋಜಿಸಲಾಗಿದ್ದ ಸಮಾಗಮ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕಲಾಕೃತಿಗಳ ಪ್ರದರ್ಶನ ಅನಾವರಣಗೊಳಿಸಿ ಮಾತನಾಡಿದರು.


ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯು ಚಾಂಪಿಯನ್ ಆಗಿ ಹೊರಹೊಮ್ಮುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ಜೀವನವನ್ನು ಆನಂದಿಸಬೇಕು. ಹಾಗೇ ಅವರ ನಡವಳಿಕೆಯಲ್ಲಿ ಶ್ರೇಷ್ಠತೆಯನ್ನು ಹೊಂದಿರಬೇಕು. ಇಂದು ಎಲ್ಲಿದ್ದೀರಿ ಹಾಗೂ ಮುಂದೆ ಭವಿಷ್ಯದಲ್ಲಿ ನೀವು ಎಲ್ಲಿರುವಿರಿ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.


ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್ ಮಾತನಾಡಿ, ಬೇಸಿಗೆ ಶಿಬಿರ ಯಶಸ್ವಿಯಾಗಲು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಕೊಡುಗೆ ಅಪಾರವಾಗಿದೆ. ೨೬೦ ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಸಕ್ತಿ ಹಾಗೂ ಲವಲವಿಕೆಯಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮುಂದೆಯೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಇಂತಹ ಹಲವು ಶಿಬಿರಗಳನ್ನು ಆಯೋಜನೆ ಮಾಡಿ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯ ಶಾಲೆಯ ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ, ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಆಡಳಿತ ಮಂಡಳಿ ಸದಸ್ಯ ಗುರುದತ್ತ್.ಸಿ.ಎಸ್, ಆಡಳಿತ ನಿರ್ವಹಣಾಧಿಕಾರಿ ಪಿ.ರವಿ ಸೇರಿದಂತೆ ಶಾಲಾ ಸಿಬ್ಬಂದಿಗಳು, ಪಾಲಕರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ತರಬೇತುದಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು.


ಕಳೆದ ೨೦ ದಿನಗಳಿಂದ ನಡೆಸಿದ ಶಿಬಿರದಲ್ಲಿ ಪಾಲ್ಗೊಂಡಿದ್ದ ೨೫೦ ಮಕ್ಕಳು ತಾವು ಕಲಿತ ವಿಭಿನ್ನ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಯಾರಿಸಿದ್ದ ವಿವಿಧ ರೀತಿಯ ಕಲಾಕೃತಿಗಳ ಪ್ರದರ್ಶನ ಕೂಡ ನಡೆಯಿತು.