ಜಿಲ್ಲೆ

ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಕಿರಣ್ ಗೌಡ.ಜಿ

ಕೆ.ಆರ್.ಪೇಟೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ವಿಜಯವಾಣಿಯ ನಾರಿ ನಿನಗೊಂದು ಸ್ಯಾರಿ ಶೀರ್ಷಿಕೆಯಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರ ಪೈಕಿ ಐವರು ಬಹುಮಾನಿತ ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಬೂಕನಕೆರೆ ಹೋಬಳಿ ಕಂದಾಯ ನಿರೀಕ್ಷಕಿ ಬಿ.ಎಲ್.ಚಂದ್ರಕಲಾ ಚಾಲನೆ ನೀಡಿದರು.

ಮಹಿಳೆಯರು ಪ್ರಶ್ನೆಗೆ ಉತ್ತರಿಸಿ ಸೀರೆಯನ್ನು ಗೆಲ್ಲುವ ಅವಕಾಶವನ್ನು ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಕಲ್ಪಿಸಿತ್ತು. 45 ದಿನಗಳವರೆಗೆ ಪತ್ರಿಕೆಯಲ್ಲಿ ಪ್ರತಿದಿನವೂ ಒಂದೊಂದು ಪ್ರಶ್ನೆಗೆ ಉತ್ತರವನ್ನು ಕೇಳಲಾಗಿತ್ತು. ತಾಲೂಕಿನಾದ್ಯಂತ ಹಲವು ಮಹಿಳೆಯರು ಕೂಪನ್‌ಗಳನ್ನು ಹಾಕಿದ್ದರು. ಕಂದಾಯ ನಿರೀಕ್ಷಕಿ ಬಿ.ಎಲ್.ಚಂದ್ರಕಲಾ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಕೂಪನ್ ಎತ್ತುವ ಮೂಲಕ ಅದೃಷ್ಟಶಾಲಿ ಐವರು ವಿಜೇತರನ್ನು ಆಯ್ಕೆ ಮಾಡಲಾಯಿತು. ನೆರೆದಿದ್ದವರಿಂದ ಮೆಚ್ಚುಗೆ ವ್ಯಕ್ತವಾಯಿತು.

ಬಿ.ಎಲ್.ಚಂದ್ರಕಲಾ ಮಾತನಾಡಿ, ಮಹಿಳೆಯರಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸುವುದರ ಜತೆಗೆ ಸ್ಪರ್ಧಾ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ನಾರಿ ನಿನಗೊಂದು ಸ್ಯಾರಿ ಬಹುಮಾನ ಸ್ಪರ್ಧೆ ಆಯೋಜಿಸಿರುವುದು ಮೆಚ್ಚುಗೆಯ ಸಂಗತಿ. ಇಂತಹ ಕಾರ್ಯಕ್ರಮದಿಂದ ಪ್ರಚಲಿತ ವಿದ್ಯಮಾನಗಳು ಅರಿವಾಗುತ್ತದೆ. ಮಕ್ಕಳಲ್ಲೂ ಸ್ಪರ್ಧಾಭಾವನೆ ಮೂಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಪತ್ರಿಕೆ ಓದುವವರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೂಕನಕೆರೆ ಕಂದಾಯ ನಿರೀಕ್ಷಕಿ ಬಿ.ಎಲ್.ಚಂದ್ರಕಲಾ, ಗ್ರಾಮ ಲೆಕ್ಕಾಧಿಕಾರಿ ಕಾವ್ಯಾ, ಶ್ವೇತಾ, ಅನಿತಾ ಮತ್ತು ವಾಣಿ ಇದ್ದರು.

ಸ್ಯಾರಿ ಗೆದ್ದ ನಾರಿಯರು: ಕಿಕ್ಕೇರಿ ಅಂಗಡಿಬೀದಿ ಕೆ.ವಿ.ನಾಗರತ್ನಾ, ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಸಹಾಯಕಿ ಎಚ್.ವೈ.ಯೋಗೇಶ್ವರಿ, ಪಟ್ಟಣದ ಹೇಮಾವತಿ ಬಡಾವಣೆಯ ಪವಿತ್ರಾ, ದೊಡ್ಡಯಾಚೇನಹಳ್ಳಿ ಗೃಹಿಣಿ ಸುಮಯ್ಯ, ನಾರಾಯಣಪುರ ಸೌಭಾಗ್ಯಾ