ವಿಜಯಪುರ: ರೈತರು ಸ್ವಾವಲಂಬಿಗಳಾಗಬೇಕು. ಅಂದಾಗ ಮಾತ್ರ ದೇಶ ಕೂಡ ಸ್ವಾವಲಂಬಿ ಎನ್ನಿಸಿಕೊಳ್ಳಲು ಸಾಧ್ಯ ಎಂದು ಬಾಲಗಾಂವ-ಕಾತ್ರಾಳದ ಗುರುದೇವಾಶ್ರಮದ ಪೂಜ್ಯ ಅಮೃತಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಭಾರತೀಯ ಕಿಸಾನ್ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಉತ್ತರ ಪ್ರಾಂತ ರೈತ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಯಲಿನಲ್ಲಿ ಕೆಲಸ ಮಾಡುವ ರೈತರೇ ನಿಜವಾದ ಶ್ರೀಮಂತರು. ಆದರೆ, ಪ್ರಸಕ್ತ ಕಾಲಘಟ್ಟದಲ್ಲಿ ರೈತರು ಪರಾವಲಂಬಿಗಳಾಗುತ್ತಿದ್ದಾರೆ. ಹೀಗಾಗಿ ಅವರು ಬಡವರು ಎಂದು ಭಾವಿಸಿಕೊಂಡಿದ್ದಾರೆ. ರೈತರಲ್ಲಿ ಸ್ವಾವಲಂಬಿತನ ಬೆಳೆಯಬೇಕು. ಅದಕ್ಕಾಗಿ ಆಳುವ ವರ್ಗ ಮತ್ತು ಸಮಾಜ ಪೂರಕ ವಾತಾವರಣ ನಿರ್ಮಿಸಿಕೊಡಬೇಕೆಂದರು.
ಈ ಹಿಂದೆ ಉಪ್ಪು ಹೊರತು ಪಡಿಸಿ ಪ್ರತಿಯೊಂದು ಆಹಾರ ಪದಾರ್ಥವೂ ಹಳ್ಳಿಗಳಲ್ಲಿಯೇ ದೊರಕುತ್ತಿತ್ತು. ಕೈಗಾರಿಕೆ, ಉದ್ಯಮಗಳು ಇರದ ಕಾಲಘಟ್ಟದಲ್ಲಿಯೇ ಭಾರತ ಜಗತ್ತಿನ ಶ್ರೀಮಂತ ರಾಷ್ಟ್ರವಾಗಿತ್ತು. ಸ್ವಾವಲಂಬಿಯಾಗಿತ್ತು. ಆದರೆ ಇಂದು ಗೊಬ್ಬರ, ಕೃಷಿ ಪರಿಕರಗಳನ್ನು ಕಾರ್ಖಾನೆಗಳು ಉತ್ಪಾದನೆ ಮಾಡುತ್ತಿವೆ. ಹಣ ಕೊಟ್ಟು ಖರೀದಿ ಮಾಡಿ ಕಾರ್ಖಾನೆಗಳ ಮಾಲೀಕರನ್ನು ಶ್ರೀಮಂತ ಮಾಡುತ್ತಿದ್ದೇವೆ. ಉಳಿದ ಅಲ್ಪಸ್ವಲ್ಪ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಿ ರೈತರು ಬಡವರಾಗಿಯೇ ಉಳಿಯುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.
ಶ್ರಮ ಹಾಕಿದಷ್ಟೂ ಫಲಕೊಡುವ ಏಕೈಕ ಉದ್ಯಮವೆಂದರೆ ಅದು ಕೃಷಿ ಮಾತ್ರ. ಭೂಮಿ ತಾಯಿಗೆ ಒಮ್ಮೆ ಬಿತ್ತಿದರೆ ನಮ್ಮ ಉಡಿ ತುಂಬುವಷ್ಟು ಬೆಳೆ ಕೊಡುತ್ತಾಳೆ. ಕೃಷಿ ಜೊತೆ ಹೈನುಗಾರಿಕೆ ಮಾಡಿದರಂತೂ ಸ್ವರ್ಗ ಸದೃಶ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಕೇವಲ 200 ಅಕ್ರಮ ಕಸಾಯಿಖಾನೆಗಳು ಇದ್ದವಂತೆ. ಈಗ ಅಧಿಕೃತವಾಗಿ 36 ಸಾವಿರ ಕಸಾಯಿಖಾನೆಗಳು ಇವೆ. ಜಗತ್ತಿನಲ್ಲಿ ಹೆಚ್ಚು ಕಸಾಯಿಖಾನೆ ಹೊಂದಿದ ದೇಶ ಭಾರತ. ಹೆಚ್ಚು ಮಾಂಸ ರಫ್ತು ಮಾಡುವ ದೇಶ ಕೂಡಾ ಭಾರತವಾಗಿದೆ. ಕಸಾಯಿಖಾನೆಗೆ ಎತ್ತು, ಆಕಳು ಮಾರಾಟ ಮಾಡಬೇಡಿ ಎಂದು ಸಲಹೆ ನೀಡಿದರು.
ಅಖಿಲ ಭಾರತೀಯ ಕಿಸಾನ್ ಸಂಘದ ಸಂಘಟನಾ ಕಾರ್ಯದರ್ಶಿ ದಿನೇಶ ಕುಲಕರ್ಣಿ ಮಾತನಾಡಿ, ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನದ ಬೆಲೆಯನ್ನು ತೀರ್ಮಾನ ಮಾಡುತ್ತಿರುವುದು ನಾವಲ್ಲ. ಅದರ ಬೆಲೆ ನಿರ್ಧಾರ ಮಾಡುವುದು ನಮ್ಮ ಎದುರಿಗೆ ಇರುವ ಖರೀದಿದಾರರು. ನಮ್ಮ ಬೆಳೆಗೆ ನಾವೇ ಬೆಲೆಯನ್ನು ನಿರ್ಧಾರದ ಮಾಡಲು ಆಗದ ಸ್ಥಿತಿಯಲ್ಲಿದ್ದೇವೆ. ಅಲ್ಲದೇ, ನಮ್ಮ ಉತ್ಪಾದನೆಗೆ ನಾವೇ ತೆರಿಗೆ ಕಟ್ಟಬೇಕು. ಖರೀದಿ ಮಾಡುವವರು ತೆರಿಗೆ ಕಟ್ಟಲ್ಲ. ಇಂತಹ ಸಮಸ್ಯೆಗೆ ಕಾರಣ ರೈತ ಸಂಘಟನೆಯಾಗದೆ ಇರುವುದು. ಹೀಗಾಗಿ ಕಿಸಾನ್ ಸಂಘವು ರೈತರ ಸಂಘಟನೆ ಮಾಡುತ್ತಿದೆ. ರೈತರು ಸಂಘಟನೆಯಾದರೆ ನಮ್ಮ ಕೃಷಿ ಉತ್ಪನ್ನದ ಬೆಲೆ ಸೇರಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗುತ್ತದೆ ಎಂದರು.
ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ ಮಾತನಾಡಿ, ರೈತರಲ್ಲಿ ಮಾಹಿತಿ ಕೊರತೆ ಇದೆ. ಆದ್ದರಿಂದ ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿ ಇರಬೇಕು. ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿ ಮಾಡಿಕೊಳ್ಳಬೇಕು. ಪರಿಸರ ಕಾಪಾಡಿಕೊಂಡು ಕೃಷಿಯಲ್ಲಿ ತೊಡಗುವುದು ಅಗತ್ಯವಾಗಿದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಕೋಕರೆ, ನೀರಾವರಿ ಹೋರಾಟಗಾರ ಡಾ.ಕಂಠೀರವ ಕಿಲ್ಲೊಳ್ಳಿ, ಪರಿಸರವಾದಿ ನಾನಾಗೌಡ ಪಾಟೀಲ, ಸಾವಯವ ಕೃಷಿಕ ರಾಜಶೇಖರ ನಿಂಬರಗಿ, ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಮೆಡೆಗಾರ, ಪದಾಧಿಕಾರಿಗಳಾದ ಗುರುನಾಥ ಶಂಕರ ಬಗಲಿ, ಗಂಗಾಧರ ಕಾಸರಘಟ್ಟ, ಮಲ್ಲನಗೌಡ ಪಾಟೀಲ, ಮಾಧವ ಹೆಗಡೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಭಾರತೀಯ ಕಿಸಾನ್ ಸಂಘದ ನೇತೃತ್ವ ರೈತರು ಬೃಹತ್ ಶೋಭಾಯಾತ್ರೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ರೈತರ ಶೋಭಾ ಯಾತ್ರೆ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕ ಸಭೆಯಾಗಿ ಪರಿವರ್ತನೆಗೊಂಡಿತು.
ರೈತರ, ಮಠಾಧೀಶರ, ದಲಿತರ, ಹಿಂದುಳಿದ ವರ್ಗದ ಹಾಗೂ ಶಾಲಾ ಕಾಲೇಜುಗಳ ಜಮೀನುಗಳು ವಕ್ಫ್ ಎಂದು ಪಹಣಿಯಲ್ಲಿ ನಮೂದಾಗಿರುವುದನ್ನು ಕೂಡಲೇ ತೆಗೆಯಬೇಕು. ಆಲಮಟ್ಟಿ ಅಣೆಕಟ್ಟೆ ಎತ್ತರ 524.256 ಮೀಟರ್‌ಗೆ ಎತ್ತರಿಸಬೇಕು. ಕೃಷ್ಣಾ ಕೊಳ್ಳದ 3ನೇ ಹಂತದ ಎಲ್ಲ ನೀರಾವರಿ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಬೇಕು. ರೇವಣಸಿದ್ಧೇಶ್ವರ ಏತ ನೀರಾವರಿ 1ನೇ ಹಂತದಲ್ಲಿ 28000 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಇನ್ನುಳಿದ ಚಡಚಣ ಹಾಗೂ ಬಬಲೇಶ್ವರ ಭಾಗದ 21000 ಹೆಕ್ಟೇರ್‌ಗೆ ನೀರಾವರಿ ಒದಗಿಸುವ ಕಾಮಗಾರಿಗೆ ಟೆಂಡರ್ ಕರೆದು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಹೊರ್ತಿ ಭಾಗದ 19 ಕೆರೆಗಳಿಗೆ ನೀರು ತುಂಬಲು ಕ್ರಮ ಕೈಕೊಂಡು ಉದ್ಘಾಟಿಸಿ ಎಲ್ಲ 19 ಕೆರೆಗಳಿಗೆ ನೀರು ಹರಿಸಬೇಕು. ಡೋಣಿ ನದಿ ಪುನಃಶ್ಚೇತನಗೊಳಿಸಬೇಕು. ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಬೆಳೆ ಹಾನಿ ಅನುಭವಿಸಿದ ರೈತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು. ಹೀಗೆ ಇನ್ನೂ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.