ಮಡಿಕೇರಿ: ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವಿಸುವ ಮೂಲಕ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಕರೆ ನೀಡಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ಜಾತಿ ತಾನೊಂದೇ ವಲಂ ಪಂಪ ಹೇಳಿರುವಂತೆ ಯಾವುದೇ ಜಾತಿ, ಧರ್ಮ, ಅಸಮಾನತೆ ಇಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಮಾನವ ಹಕ್ಕುಗಳನ್ನು ಉಳಿಸಿ ವಿಶ್ವ ಮಾನವರಾಗಬೇಕು. ಮಹಿಳೆಯರ ಮತ್ತು ಮಕ್ಕಳ ಶೋಷಣೆ, ಜಾತಿ ಹೆಸರಿನಲ್ಲಿ ನಿಂದನೆ ಮಾಡುವುದು ಮಾನವ ಹಕ್ಕು ಉಲ್ಲಂಘನೆ ಮಾಡಿದಂತೆ. ಆದ್ದರಿಂದ ಮಾನವ ಹಕ್ಕುಗಳನ್ನು ರಕ್ಷಿಸುವ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಶರಣರು, ದಾಸರು ಸೇರಿದಂತೆ ಎಲ್ಲರೂ ಮಾನವ ಹಕ್ಕುಗಳ ಉಳಿವಿಗಾಗಿ ಹೋರಾಡಿದ್ದಾರೆ. ಜಾತಿ ಪದ್ಧತಿ ಮತ್ತು ಮೌಢ್ಯತೆ ನಿರ್ಮೂಲನೆಗೆ ಶ್ರಮಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಹ ಸಂವಿಧಾನದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಭಾರತ ಸಂವಿಧಾನಕ್ಕೆ ಸಂಪೂರ್ಣ ನಂಬಿಕೆ ಮತ್ತು ನಿಷ್ಠೆ ಹೊಂದಿರಬೇಕು. ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಕರ್ತವ್ಯವನ್ನು ಸಂವಿಧಾನಾತ್ಮಕವಾಗಿ ನಿರ್ವಹಿಸಬೇಕು ಎಂದರು.
ಯಾವುದೇ ತಾರತಮ್ಯವಿಲ್ಲದೇ ಗೌರವಿಸಬೇಕು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಿಚಾರಗಳಿಂದ, ಮಾತುಗಳಿಂದ ಅಥವಾ ನಡವಳಿಕೆ, ಕೃತ್ಯಗಳಿಂದ ಬೇರೆಯವರ ಮಾನವ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಮಾತನಾಡಿ, ಜಾತಿ, ಧರ್ಮ, ಸಾಮಾಜಿಕ ಪಿಡುಗಿನ ಹೆಸರಿನಲ್ಲಿ ಬೇಧ ಭಾವವನ್ನು ಸಮಾಜದಲ್ಲಿ ಇಂದಿಗೂ ಕಾಣುತ್ತೇವೆ. ಇವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಕಾಣುತ್ತೇವೆ. ಸಮಾಜದಲ್ಲಿ ಪ್ರತಿಯೊಬ್ಬರನ್ನು ಸೌಜನ್ಯದಿಂದ ಕಾಣುವ ಮೂಲಕ ಸಮಾನತೆ, ಸ್ವಾತಂತ್ರ್ಯ, ಸಹಭಾಳ್ವೆ ನಡೆಸಬೇಕು. ಶ್ರೀ ಸಾಮಾನ್ಯರು ಎಲ್ಲರೂ ಒಂದೇ ಎಂದು ಭಾವಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಅವರ ಕಾನೂನು ಸಲಹೆಗಾರ ಲೋಕೇಶ್ ಕುಮಾರ್ ಮಾತನಾಡಿ, ಭಾರತ ಸಂವಿಧಾನದಲ್ಲಿ ಖಾತರಿ ಪಡಿಸಲಾಗಿರುವ ಜೀವನದ, ಸ್ವಾತಂತ್ರ್ಯದ, ಸಮಾನತೆ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳೇ ಮಾನವ ಹಕ್ಕುಗಳಾಗಿದೆ. ಎಲ್ಲಾ ಮಾನವ ಜೀವಿಗಳು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು ಮತ್ತು ಪ್ರತಿಯೊಬ್ಬರೂ ಯಾವುದೇ ತರಹದ ತಾರತಮ್ಯ ಇಲ್ಲದ ಹಕ್ಕುಗಳನ್ನು ಹಾಗೂ ಸ್ವಾತಂತ್ರ್ಯವನ್ನು ಹೊಂದುವ ಕಾನೂನು ಬದ್ಧ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದರು.
ಜೀವಿಸುವ, ಸಮಾನತೆಯ, ವೈಯಕ್ತಿಕ ಸ್ವಾತಂತ್ರ್ಯ, ಶೋಷಣೆಯ ವಿರುದ್ಧ, ಗುಲಾಮಗಿರಿ ವಿರುದ್ಧ, ಶಿಕ್ಷಣದ ಹಕ್ಕು, ಅಭಿವೃದ್ಧಿ ಹಕ್ಕು ಹೀಗೆ ಪ್ರತಿಯೊಂದು ಹಕ್ಕುಗಳನ್ನು ಹೊಂದಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕುವೆಂಪು ಅವರ ವಾಣಿಯಂತೆ ಸರ್ವರಿಗೂ ಮಾನವ ಹಕ್ಕುಗಳ ಸಂರಕ್ಷಣೆ ಮಾನವ ಹಕ್ಕು ಆಯೋಗದ ಘೋಷಣೆಯಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಸಪ್ಪ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪ್ರಾಂಶುಪಾಲರಾದ ಪಿ.ಎಂ.ವಿಜಯ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕ ಮಮತ, ಉಪ ವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಸುಪ್ರಿತಾ, ಶಾಲಾ ಶಿಕ್ಷಣ ಇಲಾಖೆಯ ಕೃಷ್ಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಶಂಕರ, ಶಿರಸ್ತೆದಾರರಾದ ಪ್ರಕಾಶ್, ಮಧುಕರ, ಷಣ್ಮುಕ ಇತರರು ಇದ್ದರು.