Gavel on desk. Isolated with good copy space. Dramatic lighting. 
ಜಿಲ್ಲೆ

ಪ್ರತಿಯೊಬ್ಬರಿಗೂ ಕಾನೂನು ತಿಳಿವಳಿಕೆ ಅಗತ್ಯ

ಸದೇಶ್ ಕಾರ್ಮಾಡ್

ಮೈಸೂರು: ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಅನ್ಯಾಯಕ್ಕೆ ಒಳಗಾದವರು ನಮಗೆ ಯಾರು ಇಲ್ಲ ಎಂದು ಭಾವಿಸ ಬಾರದು. ನಿಮಗಾಗಿ ಕಾನೂನು ನೆರವು ನೀಡಲು ಕಾನೂನು ಸೇವೆಗಳ ಪ್ರಾಧಿಕಾರ ಇದೆ ಎಂದು ಪ್ರಾಧಿಕಾರದ ಮುಖ್ಯ ಕಾನೂನು ನೆರವು ಅಭಿರಕ್ಷಕ ಎಂ.ಎನ್. ನವೀನ್ ತಿಳಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ಕಾರ್ಮಿಕರ ಹಕ್ಕುಗಳ ಸೇವಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಭಾ ಪುರಸ್ಕಾರ ಮತ್ತು ಕಾರ್ಮಿಕರ ಹಕ್ಕುಗಳ ಕಾರ್ಯಾಗಾರದಲ್ಲಿ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ವಕೀಲರನ್ನು ನೇಮಕ ಮಾಡಿಕೊಳ್ಳಲು ಸಾಮರ್ಥ್ಯ ಇಲ್ಲದೆ ಇರುವವರಿಗೆ ಉಚಿತವಾಗಿ ಪ್ರಾಧಿಕರದಿಂದ ವಕೀಲರನ್ನು ನೇಮಿಸಲಾಗುವುದು. ಅಸಹಾಯಕರು, ನಿಗರ್ತಿಕರು, ಆರ್ಥಿಕ ದುರ್ಬಲರು ನಮ್ಮನ್ನು ಸಂಪರ್ಕಿಸಿದರೆ ನೆರವು ನೀಡುತ್ತೇವೆ ಎಂದರು.

ರಾಜ್ಯ ಕಾರ್ಮಿಕರ ವಿಮಾ ನಿಗಮದ ಅಧಿಕಾರಿ ವಿ.ವಿನಯ್ ಕುಮಾರ್ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಮಾಹಿತಿ ಕೊರತೆಯಿಂದ ಸವಲತ್ತುಗಳಿಂದ ವಂಚಿತವಾಗುತ್ತಿದ್ದಾರೆ. ಹಾಗಾಗಿ ಕಾರ್ಮಿಕರು ಮಾಹಿತಿ ಪಡೆದು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘದ ಅಧ್ಯಕ್ಷ ಎನ್.ಕೃಷ್ಣ, ಕಾರ್ಯದರ್ಶಿ ಎಂ.ಲಲಿತಾ ರಾವ್, ಉದ್ಯಮಿಗಳಾದ ಶುಭಾ ಕೃಪೇಶ, ವಿ.ರಾಮಮೂರ್ತಿ, ರದಿವುಲ್ಲಾ ಖಾನ್, ಪಿ.ಪ್ರಶಾಂತ್, ಕೆ.ಎಚ್.ಮಹೇಶ್ ಇದ್ದರು.