ಜಮಖಂಡಿ: ಪ್ರತಿ ಧರ್ಮವೂ ತನ್ನದೇ ಆದ ಧರ್ಮ ಸಂಸ್ಕಾರ ಮೂಲಕ ವ್ಯಕ್ತಿಯನ್ನು ಒಳಗೆ ಇಂಬಿಟ್ಟುಕೊಳ್ಳುತ್ತದೆ. ಲಿಂಗಾಯತ ಧರ್ಮದ ಪ್ರಮುಖ ಸಂಸ್ಕಾರವೇ ಇಷ್ಟಲಿಂಗ ದೀಕ್ಷೆ. ಬಸವ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರೂ ಲಿಂಗಧಾರಿಗಳಾಗಬೇಕು ಎಂದು ಶಿರೂರ ಮಹಾಂತ ತೀರ್ಥದ ಡಾ. ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ದಾನಮ್ಮ ದೇವಿ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಬಸವ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ ಹಾಗೂ ಲಿಂಗ ಪೂಜಾ ವಿಧಾನದ ಕುರಿತು ತಿಳಿಸಿದರು.
ಲಿಂಗಧಾರಣೆ ಬೇರೆ, ಲಿಂಗದೀಕ್ಷೆ ಬೇರೆ. ಹುಟ್ಟಿದಾಗ ಇಷ್ಟಲಿಂಗ ಕಟ್ಟುವ ವಿಧಿಯೇ ಲಿಂಗಧಾರಣೆ, ನಂತರ 14 ರಿಂದ 15 ವರ್ಷಗಳಾದಾಗ ಮಗುವು ಬಾಲ್ಯಾವಸ್ಥೆ ತೊರೆದು ತಾರುಣ್ಯಕ್ಕೆ ಕಾಲಿಡುವಾಗ, ಸದ್ಗುರುವಿನಿಂದ ಲಿಂಗದೀಕ್ಷೆ ಮಾಡಿಸಬೇಕು. ಲಿಂಗಧಾರಣೆ ನಿಶ್ಚಯ ಕಾರ್ಯದಂತಿದ್ದರೆ, ಲಿಂಗದೀಕ್ಷೆಯು ಲಗ್ನ ಕಾರ್ಯವಿದ್ದಂತೆ. ಆದ್ದರಿಂದ ಪ್ರತಿಯೊಬ್ಬರೂ ದೀಕ್ಷೆಯೆಂಬ ಆಧ್ಯಾತ್ಮಿಕ ಲಗ್ನ ಮಾಡಿಕೊಂಡು ಲಿಂಗಪತಿಯೊಡನೆ ಶರಣ ಸತಿಯಾಗಿ ಲಿಂಗ ಭೋಗೋಪಭೋಗವೆಂಬ ಸಂಸಾರ ನಡೆಸಿ ದೇವನನ್ನು ಸೇರಬೇಕು ಎಂದರು ಹೇಳಿದರು.
ಸದ್ಗುರುವಿನಿಂದ ಇಷ್ಟಲಿಂಗ ದೀಕ್ಷೆ ಪಡೆದ ಪ್ರತಿಯೊಬ್ಬ ಲಿಂಗವಂತನು ಪ್ರಾತಃಕಾಲದಲ್ಲಿ ಬಸವಾದಿ ಪ್ರಮಥರನ್ನು ಇಷ್ಟಲಿಂಗವನ್ನು ಧ್ಯಾನಿಸುತ್ತ ಯೋಗ ನಿದ್ರೆಯಿಂದ ಏಳಬೇಕು. ಶರಣರ ಭಾವಚಿತ್ರ ನೋಡುತ್ತ ಇಷ್ಟಲಿಂಗ ಪೂಜಾ ಮಹತ್ವದ ವಚನ ಹೇಳಬೇಕು ಎಂದರು.
ನಮಗೆ ಧರ್ಮ ಸಂಸ್ಕಾರ ಸುಜ್ಞಾನ ನೀಡಿ ಉದ್ಧರಿಸಿದ ವಿಶ್ವಗುರು ಬಸವಣ್ಣನವರ ಸ್ಮರಣೆ ಮಾಡಬೇಕು. ಧರ್ಮಗುರು ಬಸವಣ್ಣ ಕೊಟ್ಟ ದಿವ್ಯ ಪಥದಲ್ಲಿ ನಡೆದ ಎಲ್ಲ ಶರಣರನ್ನು ಒಟ್ಟಾಗಿ ಸ್ಮರಿಸಬೇಕು. ನಮಗೆ ದೀಕ್ಷೆ ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಬೇಕು. ನನ್ನ ತ್ರಿಕರಣಗಳಿಂದ ತಿಳಿದೊ ತಿಳಿಯದೊ ಮಾಡಿದ ಸಕಲ ಪಾಪ ಪರಿಹಾರಕ್ಕಾಗಿ ಸದ್ಭಕ್ತಿ, ಸುಜ್ಞಾನ, ಸಂಪತ್‌ಸಿದ್ಧಿಗಾಗಿ ಶ್ರೀ ಗುರುಲಿಂಗ ಜಂಗಮ ಪ್ರಸಾದಕ್ಕಾಗಿ ಇಷ್ಟಲಿಂಗ ಪೂಜೆ ಮಾಡುತ್ತೇನೆಂದು ಸಂಕಲ್ಪ ಮಾಡಬೇಕು.
ಶುದ್ಧೀಕರಿಸಿದ ಭಸ್ಮದಿಂದ ಪಂಚಕೋನ ರಚಿಸಿ ವಿಭೂತಿಯನ್ನು ಬಲಗೈ ನಡುವಿನ ಮೂರು ಬೆರಳುಗಳಿಂದ ಬಸವ ಮಂತ್ರ ಉಚ್ಛರಿಸುತ್ತ ಹಣೆ, ಕಿವಿಗಳು, ಕಂಠ, ಎದೆ, ಭುಜಗಳು, ನಾಭಿ, ಬೆನ್ನು, ಮೊಳಕೈಗಳು, ಪಕ್ಕೆಗಳು, ಮೊಳಕಾಲುಗಳು, ಪಾದ ಇತ್ಯಾದಿ ಸವಾರ್ಂಗಕ್ಕೂ ಧರಿಸಬೇಕು. ರುದ್ರಾಕ್ಷಿ ಮಾಲೆಗೆ ನಮಸ್ಕರಿಸಿ ಮಂತ್ರಧ್ಯಾನದಿಂದ ಶುದ್ಧೀಕರಿಸಿದ ರುದ್ರಾಕ್ಷಿ ಮಾಲೆಯನ್ನು ಕೊರಳಲ್ಲಿ ಧರಿಸಬೇಕು. ಇಷ್ಟಲಿಂಗಕ್ಕೆ ಶರಣು ಸಲ್ಲಿಸಿ ಜಲಶುದ್ಧಿಗೊಳಿಸಬೇಕು. ಲಿಂಗ ಮಜ್ಜನದ ನಂತರ ತೇವ ಒರೆಸಿ ಅಂಗೈಯಲ್ಲಿ ಪಂಚಕೋನ ರಚಿಸಿ, ಲಿಂಗಕ್ಕೆ ವಿಭೂತಿ ಧಾರಣೆ, ರುದ್ರಾಕ್ಷಿ ಮಾಲೆ ಧಾರಣೆ, ಗಂಧ ಧಾರಣೆ, ಅಕ್ಷತೆ ಧಾರಣೆ, ಬಿಲ್ವ ಧಾರಣೆ, ಧೂಪಾರ್ಪಣೆ, ಆರತಿ ಅರ್ಪಣೆ ಕ್ರಮವತ್ತಾಗಿ ಇಷ್ಟಲಿಂಗದೇವನಿಗೆ ಭಕ್ತಿ ಭಾವದಿಂದ ಅರ್ಪಿಸಬೇಕು ಎಂದರು.
ಲಿಂಗ ಪೂಜೆಯಿಂದ ದೇಹದ ಅಂಗಾಂಗಳಿಗೆ ಪುಷ್ಠಿ ನೀಡಿದಂತಾಗುತ್ತದೆ. ಲಿಂಗ ಸಾಮರಸ್ಯದ ಸಂಕೇತವಾಗಿದೆ. ಲಿಂಗದಿಂದ ಅರ್ಚನಾ ಅರ್ಪಣಾ ಭಾವ ಪ್ರಾಪ್ತಿಯಾಗುವುದು ಎಂದು ತಿಳಿಸಿದರು.
ಧಾರವಾಡ ಬಸವಯೋಗ ಮಂದಿರದ ಮಾತೋಶ್ರೀ ಅಕ್ಕನಾಗಲಾಂಬಿಕೆ ಮಾತಾಜಿ, ರಾಜಶೇಖರ ಚಿಮ್ಮಡ, ಪಟ್ಟಣಶೆಟ್ಟಿ ಸುಭಾಸ ಅನಂತಪೂರ, ರಾಜು ಜಿರಲಿ, ಮಲ್ಲು ಮುದಕಣ್ಣವರ, ಸದಾನಂದ ಬಾಗೇವಾಡಿ, ಮಹಾಂತೇಶ ಅಂಗಡಿ ಹಾಗೂ ಬಸವಕೇಂದ್ರದ ಶರಣ ಶರಣೆಯರು ಇದ್ದರು.
ಬಸವ ಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಎಂ. ಡಿ. ಸಂಕ ನಿರೂಪಿಸಿದರು. ಬಸವರಾಜ ಬಳಗಾರ ವಂದಿಸಿದರು.