ಶಿವಮೊಗ್ಗ: ಪಾಕಿಸ್ತಾನದ ಮೇಲೆ ನಮ್ಮ ಸೇನೆ ನಡೆಸಿರುವ ವಾಯುದಾಳಿಯ ಸಂಗತಿ ಚೀನಾ ಹೊರತುಪಡಿಸಿ ಬೇರೆಲ್ಲ ದೇಶಗಳಿಗೆ ಸಂತಸ ತರುವಂಥದ್ದು. ಹಲವು ಉಗ್ರ ಸಂಘಟನೆಗಳ ಚಟುವಟಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ನಡೆಸಿರುವ ದಾಳಿ ಸಂತೋಷದ ವಿಷಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸೇನೆಯ ದಾಳಿಯಿಂದಾಗಿ ಉಗ್ರರು ಹತರಾಗಿರುವುದು ಸಮಾಧಾನದ ಸಂಗತಿ. ಭಯೋತ್ಪಾದಕರು ಭಾರತೀಯ ಹೆಣ್ಣು ಮಕ್ಕಳ ಸಿಂದೂರ ಅಳಿಸುವ ಕೆಲಸ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರು ಇಟ್ಟಿರುವುದು ಸಂದರ್ಭೋಚಿತವಾಗಿದೆ ಎಂದು ಹೇಳಿದರು.
ಈ ಘಟನೆ ಬಳಿಕ ಇಡೀ ವಿಶ್ವವೇ ಇಂದು ಭಾರತದ ಜತೆಗೆ ನಿಂತಿದೆ. ನರಂದ್ರ ಮೋದಿ, ರಾಜನಾಥ ಸಿಂಗ್, ಅಮಿತ್ ಷಾ ಅವರು ಸೇನೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಟ್ವಿಟ್ ಖಾತೆಯಲ್ಲಿ ಶಾಂತಿಮಂತ್ರ ಪಠಿಸಿರುವುದು ಖಂಡನೀಯ. ವಿರೋಧ ವ್ಯಕ್ತವಾದ ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದೇಶ ಎಲ್ಲಿಯವರೆಗೆ ಶಾಂತಿ ಮಂತ್ರ ಪಠಿಸಲು ಸಾಧ್ಯ? ಇಂತಹ ಸಂದರ್ಭದಲ್ಲಿ ದೇಶದ ಜತೆ ಎಲ್ಲರೂ ನಿಲ್ಲಬೇಕು. ಭಾರತ ಉಗ್ರಗಾಮಿಗಳನ್ನು ಮಾತ್ರ ಹುಡುಕಿ ಕೊಲ್ಲುತ್ತಿದೆ. ನಾಗರಿಕರ ಮೇಲೆ ದಾಳಿ ಮಾಡಿಲ್ಲ. ಇದು ಭಾರತೀಯ ಸೇನೆಯ ಸಹಿಷ್ಣುತೆಗೆ ನಿದರ್ಶನ ಎಂದು ಅಭಿಪ್ರಾಯಪಟ್ಟರು.