ನಿಪ್ಪಾಣಿ: ತಾಯಿಯಿಂದ ಬಂದ ಭಾಷೆಯೇ ಮಾತೃಭಾಷೆ. ಭಾಷೆಗೆ ಮೇಲು-ಕೀಳು ಎಂಬುದು ಇಲ್ಲ. ಪ್ರತಿ ಭಾಷೆಗೆ ಅದರದ್ದೆ ಆದ ಮಹತ್ವ, ಗೌರವವಿದೆ. ಪ್ರತಿಯೊಬ್ಬರೂ ಎಲ್ಲ ಭಾಷೆಗಳಿಗೆ ಗೌರವ ನೀಡಬೇಕು ಎಂದು ಸ್ಥಳೀಯ ವಿಎಸ್ ಎಂಎಸ್‌ಆರ್‌ಕೆಐಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಬಿ.ಜಗದೀಶಗೌಡ ಸಲಹೆ ನೀಡಿದ್ದಾರೆ.
ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವದಾದ್ಯಂತ ಸಾವಿರಾರು ಭಾಷೆಗಳಿವೆ. ಆದರೆ, ಮಾತೃಭಾಷೆ ಮೂಲಕ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲು ಸುಲಭವಾಗುತ್ತದೆ. ಮಾತ್ರಭಾಷೆ ಹೃದಯ ಭಾಷೆಯಾಗಿದೆ ಎಂದರು.
ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ವಾಣಿ ಶಾಸಿ ಮಾತನಾಡಿ, ಮಾತೃಭಾಷೆ ನಮ್ಮ ಶರೀರದಲ್ಲಿ ರಕ್ತಗತವಾಗಿರುತ್ತದೆ. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ದೊರೆತರೆ ನಾವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜ್ಞಾನ ಪಡೆದು ಸಮಾಜದ ಅಭಿವೃದ್ಧಿಗೆ ಕೈಜೋಡಿಸಲು ಸಹಕಾರವಾಗುತ್ತದೆ ಎಂದರು. ವಿದ್ಯುನ್ಮಾನ ಹಾಗೂ ಸಂಪರ್ಕ ವಿಭಾಗದ ವಿದ್ಯಾರ್ಥಿನಿ ಆಸಿಯಾ ಮುಲ್ಲಾ ಉರ್ದು ಭಾಷೆಯ ಪ್ರಾವೀಣ್ಯತೆ ಕುರಿತು ಸಾರುತ್ತ ಕನ್ನಡ ಭಾಷೆಯ ಹಾಡಿನಿಂದ ರಾಮ-ರಹೀಮ ಇಬ್ಬರೂ ಒಂದೇ ಎಂಬ ಭಾವನೆಯನ್ನು ತೋರಿಸಿಕೊಟ್ಟರು.
ಪ್ರೊ.ಮಾಧವಿ ಆವಳೇಕರ ಎಲ್ಲ ಭಾಷೆಗಳನ್ನು ಬೆಸೆಯುವ ಹಿಂದಿ ಭಾಷೆಯ ಮಹತ್ವದ ಕುರಿತು ಮಾತನಾಡಿದರು. ಶ್ರವಣ ಜಾಧವ, ವಿದ್ಯಾಶ್ರೀ ವಡ್ಡರ, ಓಂಕಾರ ಮುತಾಲಿಕ, ಸುನೀತಾ ಗಸ್ತೆ, ಶ್ವೇತಾ ವಾಡೇಕರ್, ಆಕಾಶ ದಳವಿ ಸೇರಿ ಮತ್ತಿತರ ವಿದ್ಯಾರ್ಥಿಗಳು ಕನ್ನಡ, ಮರಾಠಿ, ಆಂಗ್ಲ, ತಮಿಳು, ಮೊದಲಾದ ಭಾಷೆಗಳ ಭಾಷಾ ವೈವಿಧ್ಯತೆ ಸಾರುವ ಭಾಷಣ, ಕವಿತೆ ಸಾದರಪಡಿಸಿದರು. ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು
ಉಪಸ್ಥಿತರಿದ್ದರು. ಪ್ರೊ.ಆಶಾಲತಾ ಕೋರಿಶೆಟ್ಟರ ನಿರೂಪಿಸಿದರು. ಪ್ರೊ.ಕವಿತಾ ವಸೇದಾರ ಸ್ವಾಗತಿಸಿ, ವಂದಿಸಿದರು.