ಶಿರಸಿ: ತಾಯಿಯ ಗರ್ಭದಲ್ಲಿರುವಾಗಲೇ ಜನಿಸಲಿರುವ ಮಗುವಿಗೆ ಶೇ. 80ರಷ್ಟು ಸಂಸ್ಕಾರ ಪ್ರಾಪ್ತವಾಗಿರುತ್ತದೆ ಎಂದು ಪ್ರಸಿದ್ಧ ವೈದ್ಯ ಡಾ. ಅಶ್ವತ್ಥ ಹೆಗಡೆ ಹೇಳಿದರು.
ಪಟ್ಟಣದ ಗಾಯತ್ರಿ ಗೆಳೆಯರ ಬಳಗ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾಷ್ಠ-ಚಿತ್ರ-ಛಾಯಾಚಿತ್ರ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಧುಮೇಹ ಹಾಗೂ ಸೂಕ್ತ ಆರೋಗ್ಯಕ್ಕಾಗಿ ಜೀವನ ಶೈಲಿ ಮತ್ತು ಯೋಗ ವಿಷಯವಾಗಿ ಆರೋಗ್ಯ ಮಾಹಿತಿ ಕುರಿತು ಅವರು ಉಪನ್ಯಾಸ ನೀಡಿದರು. ಭಾವೀ ತಂದೆ-ತಾಯಿಯರು ಇದನ್ನರಿತು ಆದರ್ಶ ಜೀವನ ನಡೆಸಬೇಕು. ಸದಾ ಪ್ರಸನ್ನವಾಗಿರಬೇಕು. ಅದೇ ನಮ್ಮ ಜೀವನ ಶೈಲಿಯನ್ನೂ ನಿರ್ಧರಿಸುತ್ತದೆ ಎಂದರು.
ಮನುಷ್ಯರು, ಪ್ರಾಣಿ ಮತ್ತು ಸಸ್ಯಗಳ ಜೊತೆ ಸಂಪರ್ಕವಿರಿಸಿಕೊಂಡು ಯೋಗ-ಧ್ಯಾನ ಮುಂತಾಗಿ ಉತ್ತಮ ಜೀವನಶೈಲಿಯೊಂದಿಗೆ ಮಧುಮೇಹ ಮುಕ್ತ ಸಮಾಜ ನಿರ್ವಿುಸಬೇಕಾಗಿದೆ. ಆರೋಗ್ಯ ಸಮೃದ್ಧಿ ಹೊಂದೋಣ ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಆಶಿಸಿದರು.
ಸಾಹಿತಿ ಜಿ.ವಿ. ಕೊಪ್ಪಲತೋಟ ಅವರು ಗಣಪತಿ ಸ್ತುತಿ ಹಾಡಿದರು. ರವಿ ಹೆಗಡೆ ಗಡಿಹಳ್ಳಿ ಪರಿಚಯಿಸಿದರು. ಎಂ.ಎಸ್. ಹೆಗಡೆ ರ್ಕ ಅವರು ಆರೋಗ್ಯ ಸಲಹೆ ಉಪನ್ಯಾಸ ನೀಡಿದ ಡಾಕ್ಟರ್ ಅಶ್ವಥ್ ಹೆಗಡೆ ಅವರನ್ನು ಗೌರವಿಸಿದರು. ಜಯಪ್ರಕಾಶ ಹಬ್ಬು ಕಾರ್ಯಕ್ರಮ ನಿರ್ವಹಿಸಿದರು. ವೈಶಾಲಿ ವಿ.ಪಿ. ಹೆಗಡೆ, ಸಾಹಿತಿಗಳಾದ ಸುಬ್ರಾಯ ಮತ್ತಿಹಳ್ಳಿ, ಕವಿ ಕೃಷ್ಣ ಪದಕಿ, ತಾರಾ ಹೆಗಡೆ, ಶೋಭಾ ಹೆಗಡೆ, ಗ.ಮ. ತುಂಬೆಮನೆ, ವಾಸುದೇವ ಶಾನಭಾಗ, ಲಕ್ಷ್ಮಣ ಶಾನಭಾಗ, ಡಾ.ರವಿಕಿರಣ ಪಟವರ್ಧನ, ನಾಗೇಂದ್ರ ಮತ್ತಮುರ್ಡ, ಡಿ.ಎಸ್. ಹೆಗಡೆ, ಗೀತಾ ಸಭಾಹಿತ, ವಿ.ಜಿ. ಗಾಯತ್ರಿ, ಇತರರು ಉಪಸ್ಥಿತರಿದ್ದರು.
ಗಮನ ಸೆಳೆದ ಪ್ರದರ್ಶನ: ಗಾಯತ್ರಿ ಗೆಳೆಯರ ಬಳಗದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಾಹಕ ನಾಗೇಂದ್ರ ಮುತ್ಮುರ್ಡ, ಗ.ಮ. ತುಂಬೆ, ಜಯಾ ತುಂಬೆ ದಂಪತಿಯ ಛಾಯಾ ಹಾಗೂ ಕರಕುಶಲ ವಸ್ತು, ಜಿ.ವಿ. ಕೊಪ್ಪಲತೋಟ ಅವರ ಕಾಷ್ಠ ಶಿಲ್ಪ ಪ್ರದರ್ಶನ ಗಮನ ಸೆಳೆಯಿತು. ಈ ವೇಳೆ ಕೊಪ್ಪಲತೋಟ, ತುಂಬೆಮನೆ ದಂಪತಿಯನ್ನು ಗೌರವಿಸಲಾಯಿತು. ರಾಜೀವ ಅಜ್ಜಿಬಳ, ಸುಬ್ರಾಯ ಮತ್ತಿಹಳ್ಳಿ ಸಾಧಕರ ಕುರಿತು ಮಾತನಾಡಿದರು. ಅಶೋಕ ಹಾಸ್ಯಗಾರ, ಮನೋಹರ ಮಲಮನೆ, ಮೋಹನ ಭಟ್ ಅಗಸೂರು, ರಾಮನಾಥ ಹೆಗಡೆ, ರಾಜಾರಾಮ್ ಹೆಗಡೆ, ಡಿ.ಎಂ. ಭಟ್ಟ ಕುಳವೆ, ತಾರಾ ಹೆಗಡೆ, ಶೋಭಾ ಹೆಗಡೆ ಹಾಗೂ ಜಯಪ್ರಕಾಶ ಹಬ್ಬು, ಇತರರಿದ್ದರು.