ಹುಬ್ಬಳ್ಳಿ: ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಪ್ರತಿಯೊಬ್ಬ ಶಿಕ್ಷಕರೂ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರಿಗೆ ಸಲಹೆ ನೀಡಿದರು.
ಧಾರವಾಡ ಜಿಲ್ಲಾ ಪದವಿ ಪೂರ್ವ ಕಾಲೇಜ್ಗಳ ಪ್ರಾಚಾರ್ಯರ ಸಂಘ, ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜ್ನ ಬಯೋಟೆಕ್ ಹಾಲ್ನಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶವು ಎಲ್ಲ ವಿಚಾರಗಳಲ್ಲಿ ಬದಲಾವಣೆ ಕಂಡಿದೆ. ಆದರೆ ಶಿಕ್ಷಣ ಕ್ಷೇತ್ರ ಮಾತ್ರ ಅದೇ ಸ್ಥಿತಿಯಲ್ಲಿದೆ. ಎನ್ಇಪಿ ಯಾವುದೇ ಪಕ್ಷದ ನೀತಿಯಲ್ಲ ಎಂಬುದನ್ನು ಅರಿಯಬೇಕು ಹಾಗೂ ಪ್ರಸ್ತುತ ಎನ್ಇಪಿ ವಿಚಾರವಾಗಿ ರಾಜಕಾರಣ ಮಾಡಿತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತಲುಪಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯ. ಪ್ರತಿಯೊಬ್ಬರ ಬದುಕು ಸಾರ್ಥಕವಾಗಲು ಜ್ಞಾನ ಬಹುದೊಡ್ಡ ಪಾತ್ರವಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲ ನೀಡಬೇಕು ಎಂದರು.
ಎಂಎಲ್ಸಿ ಪ್ರೊ.ಎಸ್.ವಿ. ಸಂಕನೂರ ಮಾತನಾಡಿ, ಧಾರವಾಡ ಜಿಲ್ಲೆಯು ಶಿಕ್ಷಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಕಡಿಮೆಯಾಗುತ್ತಿರುವುದು ಕಳವಳ ಮೂಡಿಸಿದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಅಧಿಕಾರಿಗಳು ಶ್ರಮವಹಿಸಿ, ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಪಿ. ಸುರೇಶ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲೆಯ ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು, ಡಾಕ್ಟರೇಟ್ ಪದವಿ ಪಡೆದ ಪ್ರಾಚಾರ್ಯರು ಮತ್ತು ಉಪನ್ಯಾಸಕರು, ಧಾರವಾಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಿ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಸಂದೀಪ ಬೂದಿಹಾಳ, ಪ್ರಮುಖರಾದ ಅಶೋಕ ಸವಣೂರ, ಟಿ.ಪಿ. ನಾರಾಯಣಕರ್, ಶಶಿಧರ ತೋಡಕರ್, ಎಫ್.ಬಿ. ಸೊರಟೂರ, ಆನಂದ ಮುಳಗುಂದ ಇತರರು ಇದ್ದರು.