ಮಂಗಳೂರು: ಪೊಲೀಸ್ ಉನ್ನತಾಧಿಕಾರಿಗಳ ನಿರ್ದೇಶನ ಮೇರೆಗೆ ಪ್ರತಿ ತಿಂಗಳ ಮೂರನೇ ಶನಿವಾರ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಲಿತ ಕುಂದುಕೊರತೆ ಸಭೆ ನಡೆಸುವುದು ಕಡ್ಡಾಯ. ಈ ಸಭೆಯ ಮಾಹಿತಿಯನ್ನು ಎಲ್ಲ ದಲಿತ ಮುಖಂಡರಿಗೆ ನೀಡಬೇಕು ಎಂದು ದ.ಕ. ಪ್ರಭಾರ ಎಸ್ಪಿ ಸಿ.ಬಿ. ರಿಷ್ಯಂತ್ ಸೂಚಿಸಿದ್ದಾರೆ.
ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ದಲಿತ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ, ದಲಿತರ ಅಹವಾಲು ಸ್ವೀಕರಿಸಿ ಮಾತನಾಡಿದರು.
ದಲಿತ ಮುಖಂಡ ಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ವರದಿಯಾಗುವ ದಲಿತ ದೌರ್ಜನ್ಯದ ಹೆಚ್ಚಿನ ಪ್ರಕರಣಗಳಲ್ಲಿ ಪೊಲೀಸರೇ ಕುಮ್ಮಕ್ಕು ನೀಡಿ ಇಲ್ಲವೇ ಬೆದರಿಸಿ ಪ್ರತಿ ದೂರು ದಾಖಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇದು ದಲಿತ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗವಾಗಿದೆ. ಬೆಳ್ತಂಗಡಿಯಲ್ಲಿ ಇಂತಹ ಘಟನೆ ನಡೆದಿದ್ದು, ಅಲ್ಲಿ ಪೊಲೀಸರೇ ಆರೋಪಿಗಳೊಂದಿಗೆ ಶಾಮೀಲಾಗಿ ಪ್ರತಿ ದೂರು ದಾಖಲಿಸುವಂತೆ ಸೂಚಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂತಹ ಪ್ರಕರಣಗಳಲ್ಲಿ ಒಂದು ಶಿಕ್ಷೆಯೂ ಆಗಿರುವ ಬಗ್ಗೆ ಮಾಹಿತಿ ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಎಸ್ಪಿ ರಿಷ್ಯಂತ್, ದೂರು-ಪ್ರತಿ ದೂರು ಸಾಮಾನ್ಯ, ಹಾಗೆಂದು ಪೊಲೀಸರೇ ಪ್ರತಿ ದೂರು ದಾಖಲಿಸುವಂತೆ ಹೇಳುವಂತಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದರು.
ಪಂಜದಲ್ಲಿ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದಲ್ಲದೆ, ತನ್ನ ಜಾಗದಿಂದ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಇರಿಸಿದ್ದಾರೆ. ಈ ಕ್ಯಾಮರಾ ಅಳವಡಿಸಿರುವುದರಿಂದ ಅಲ್ಲೇ ಸಮೀಪದ ಹೊಳೆಯಲ್ಲಿ ಸ್ನಾನ ಮಾಡುವವರ ಖಾಸಗಿತನಕ್ಕೆ ತೊಂದರೆಯಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ದಲಿತ ಮುಖಂಡ ವಿಶ್ವನಾಥ್ ಪ್ರಸ್ತಾಪಿಸಿದರು. ಅದು ಖಾಸಗಿ ವ್ಯಕ್ತಿಯ ಜಾಗವಾದ್ದರಿಂದ ಸಾರ್ವಜನಿಕರ ಚಲನವಲನಗಳಿಗೆ ಧಕ್ಕೆಯಾಗದಂತೆ ಕ್ಯಾಮರಾ ಅಳವಡಿಕೆಗೆ ಸೂಚಿಸಲಾಗುವುದು. ಈ ಬಗ್ಗೆ ದೂರುಗಳಿದ್ದರೆ ಠಾಣೆಗೆ ನೀಡಬಹುದು. ಕಂದಾಯ ಇಲಾಖೆ ಅತಿಕ್ರಮಣ ವಿರುದ್ಧ ಕ್ರಮ ಕೈಗೊಳ್ಳಬೇಕು
ಎಂದು ಎಸ್ಪಿ ಹೇಳಿದರು.