ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ, ದೇಶಾಭಿಮಾನ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪ್ರತಿ ವ್ಯಕ್ತಿಯು ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿರಬೇಕು ಎಂದು ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಬಿಸಿಎ ವಿಭಾಗ ಶುಕ್ರವಾರ ಆಯೋಜಿಸಿದ್ದ ವಿವಿಧ ಬಹು ರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ-ಉಗಮ ಉದ್ಘಾಟಿಸಿ ಮಾತನಾಡಿದ ಅವರು, 240 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆದಿರುವುದು ಸಂತಸದ ವಿಚಾರ ಮತ್ತು ಕೆಎಲ್ಇ ಸಂಸ್ಥೆಯ ದೊಡ್ಡ ಕೊಡುಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಸಿಎ ವಿಭಾಗದ ಮುಖ್ಯಸ್ಥ ಪ್ರೊ. ಸಿದ್ದಲಿಂಗಪ್ಪ ಕಡಕೋಳ ಮಾತನಾಡಿ, ಯಾವುದೇ ಕೆಲಸವನ್ನು ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಆಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಉದ್ಯೋಗ ಗಿಟ್ಟಿಸಿಕೊಂಡ 240 ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸನ್ಮಾನ ಮಾಡಲಾಯಿತು. ಕಾಲೇಜಿನ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಕಾವ್ಯಾ ವಟ್ಟಿಕುಟ್ಟಿ, ಅತ್ಯುತ್ತಮ ಪ್ರೋಗ್ರಾಮರ್ ಹರ್ಷಿತ ಬೊಸಲೆ ಮತ್ತು ಶ್ರೀನಿವಾಸ ಬಾಕಳೆ, ಅತ್ಯುತ್ತಮ ಕ್ರೀಡಾಪಟು ಗಾಯತ್ರಿ ಬೆಣಕನಹಳ್ಳಿ, ಉತ್ತಮ ಸಾಂಸ್ಕೃತಿಕ ಚಟಿವಟಿಕೆಗಾಗಿ ಸಹನಾ ಸೊದರ, ಬೆಸ್ಟ್ ಅಕಾಡೆಮಿಕ್ ಪ್ರಶಸ್ತಿಯನ್ನು ಅರ್ಪಿತಾ ಶೆಟ್ಟಿ ಪಡೆದರು.
ಪ್ರೊ. ಶಾರದಾ ಮುಲ್ಕಿಪಾಟೀಲ ಸ್ವಾಗತಿಸಿದರು. ಸಹನಾ ಮತ್ತು ದೀಶಾ ಭರತನಾಟ್ಯ ಪ್ರದರ್ಶಿಸಿದರು. ಪ್ರೊ. ಅಕ್ಷತಾ ಸಿ. ಎಸ್. ಪರಿಚಯಿಸಿದರು. ಪ್ರೊ. ಭವಾನಿ ಜಿ. ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಮಹೇಶರಾವ ವಂದಿಸಿದರು. ಪ್ರೊ. ಸುನೈನಾ ಎಂ. ಮತ್ತು ಪ್ರೊ. ಕೃಪಾ ಎನ್. ಕಾರ್ಯಕ್ರಮ ನಿರೂಪಿಸಿದರು.