ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಕೆ.ನೇಮಿರಾಜ್ ನಾಯ್ಕ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು. ಎಸಿ ವಿಜಯಪ್ರಕಾಶ್, ಹೊಸಪೇಟೆ ತಹಸೀಲ್ದಾರ್ ಎಂ.ಶ್ರುತಿ, ಹಗರಿಬೊಮ್ಮನಳ್ಳಿ ತಹಸೀಲ್ದಾರ್ ಆರ್.ಕವಿತಾ, ತಾಪಂ.ನರೇಗಾ ಯೋಜನಾಧಿಕಾರಿ ರಮೇಶ್ ಮಹಾಲಿಂಗಪುರ, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು. 
ಜಿಲ್ಲೆ

ಪ್ರತಿ ಮನೆಯಲ್ಲೂ ಕನ್ನಡದ ಜ್ಯೋತಿ ಬೆಳಗಲಿ

ಹಗರಿಬೊಮ್ಮನಹಳ್ಳಿ: ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ, ರಾಜ್ಯಕ್ಕೆ ಮಾದರಿಯಾಗುವಂತೆ ಆಚರಿಸೋಣ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ಸರ್ಕೀಟ್‌ಹೌಸ್‌ನಲ್ಲಿ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಹಗರಿಬೊಮ್ಮನಹಳ್ಳಿಯಲ್ಲಿ ಬೆಳಗ್ಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಮರಿಯಮ್ಮನಹಳ್ಳಿಯಲ್ಲಿ ಸರ್ಕಾರಿ ಕಾಲೇಜ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮರಿಯಮ್ಮನಹಳ್ಳಿಯಲ್ಲಿ ವಾದ್ಯಮೇಳ, ಕನ್ನಡದ ತೇರು, ಭುವನೇಶ್ವರಿ ಭಾವಚಿತ್ರ, ಸಾಂಸ್ಕೃತಿಕ ಕಲಾತಂಡ, ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ಆಯೋಜಿಸಬೇಕೆಂದು ಸೂಚಿಸಿದರು.


ಮರಿಯಮ್ಮನಹಳ್ಳಿಯನ್ನು ಸಂಪೂರ್ಣ ಸಿಂಗರಿಸಬೇಕು. ತೋರಣ, ಬಾಳೆಕಂಬ, ಕನ್ನಡ ಬಾವುಟಗಳನ್ನು ಕಟ್ಟಬೇಕು. ಪಟ್ಟಣದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಬೇಕು.

ವೇದಿಕೆಯಲ್ಲಿ ಕ್ಷೇತ್ರದ ಹಿರಿಯ ಸಾಹಿತಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು. ದೀಪಾವಳಿಯೂ ಇರುವುದರಿಂದ ಮನೆಮನೆಯಲ್ಲೂ ಕನ್ನಡದ ಜ್ಯೋತಿ ಬೆಳಗಲಿ. ಕಾರ್ಯಕ್ರಮದ ಯಶಸ್ಸಿಗೆ ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಒಂದೊಂದು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಶಾಸಕ ನೇಮಿರಾಜ್ ನಾಯ್ಕ ತಿಳಿಸಿದರು.