*ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಹೀರಾಪುರದಲ್ಲಿ ಡಿ.ಸಿ.ಚಾಲನೆ*
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆ ನಿಟ್ಟಿನಲ್ಲಿ ದೇಹದೊಳಗಿನ ಜಂತು ಹುಳು ನಿವಾರಣೆಗೆ 1-19 ವರ್ಷದೊಳಗಿನ ಮಕ್ಕಳು ಯಾವುದೇ ಭಯವಿಲ್ಲದೆ ಅಲ್ಬೆಂಡಾಜೋಲ್ ಮಾತ್ರೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತರನ್ನುಮ್ ಕರೆ ನೀಡಿದರು.
ಸೋಮವಾರ ನಗರದ ಹೀರಾಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ 2024-25ನೇ ಸಾಲಿನ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನ ಮುಂದಿನ ಭವಿಷ್ಯ ನೀವಾಗಿದ್ದು, ನೀವು ಅರೋಗ್ಯವನತರಾಗಿದ್ದರೆ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ. ದೇಹದ ಹೊರಗಿನ ಕಾಳಜಿ ಜೊತೆಗೆ ಚಿಕ್ಕ ವಯಸ್ಸಿನಲ್ಲಿ ದೇಹದೊಳಗಾಗುವ ಈ ಜಂತು ಹುಳು ನಿವಾರಣೆಗೆ ಈ ಮಾತ್ರೆ ಪಡೆಯುವುದು ಅವಶ್ಯಕವಾಗಿದೆ. ಪ್ರತಿ 6 ತಿಂಗಳಿಗೊಮ್ಮೆ ಈ ಮಾತ್ರೆ ಸೇವಿಸಬಹುದಾಗಿದೆ ಎಂದ ಅವರು, ಶಾಲೆಯಿಂದ ಮನೆಗೆ ಹೋದ ಮೇಲೆ ಕೈ-ಕಾಲು ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು. ಮನೆ ಸುತ್ತಲು ಉತ್ತಮ ಪರಿಸರ ಇರುವಂತೆ ನೋಡಿಕೊಳ್ಳಬೇಕೆಂದು ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದರು.
*ಮಾತ್ರೆ ಬಗ್ಗೆ ಭಯ ಬೇಡ:*
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ, ಡಿ.9 ರಿಂದ 16ರ ವರೆಗೆ ನಡೆಯುವ ಈ ನ್ಯಾಷನಲ್ ಡೀವಾರ್ಮಿಂಗ್ ಡೇ ಅಭಿಯಾನದಲ್ಲಿ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆ ನೀಡಲಾಗುತ್ತಿದ್ದು, ಮಕ್ಕಳು ಯಾವುದೇ ಭಯಕ್ಕೆ ಒಳಗಾಗದೆ ಲಘು ಉಪಹಾರ ಪಡೆದ ಬಳಿಕ ಇದನ್ನು ಚೀಪಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಈ ಮಾತ್ರೆ ಆರೋಗ್ಯ ಸಿಬ್ಬಂದಿ ನೀಡಲಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯಾದ್ಯಾಂತ ಡಿ.9 ರಿಂದ 16ರ ವರೆಗೆ ಮಾತ್ರೆ ವಿತರಣೆ ಅಭಿಯಾನದ ಅಂಗವಾಗಿ 1 ರಿಂದ 19 ವರ್ಷದೊಳಗಿನ 9,98,205 ಮಕ್ಕಳಿಗೆ 400 ಎಂ.ಜಿ. ಅಲ್ಬೆಂಡಾಜೋಲ್ ಮಾತ್ರೆ ನೀಡುವ ಗುರಿಯಿದ್ದು, 1-5 ವರ್ಷದ ಮಕ್ಕಳಿಗೆ ಅಂಗನವಾಡಿ, 6-16 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಹಾಗೂ 17-19 ಮಕ್ಕಳಿಗೆ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರೆ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಅಭಿಯಾನದ ಜಾಗೃತಿ ಪೋಸ್ಟರ್ ಗಳನ್ನು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಬಿಡುಗಡೆಗೊಳಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಅಲಿಮುದ್ದಿನ್ ಪಟೇಲ್, ಆರೋಗ್ಯ ಇಲಾಖೆಯ ವಿಭಾಗೀಯ ಉಪನಿರ್ದೇಶಕ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ.ರವಿಕಾಂತಿ ಖ್ಯಾತನಾಳ, ಡಿ.ಎಲ್.ಓ ಡಾ.ರಾಜಕುಮಾರ ಕುಲಕರ್ಣಿ,
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಿಬೋಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶರಣಪ್ಪ ಭೂಸನೂರ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಜಿಲ್ಲಾ ಬಾಯಿ ರೋಗ ಅಧಿಕಾರಿ ಡಾ.ಸಂಧ್ಯಾ ಕಾನೇಕರ್, ಜಿಮ್ಸ್ ಆರ್.ಎಮ್.ಓ ಡಾ.ನಾಗರಾಜ ಪಾಟೀಲ, ಹೀರಾಪುರ ನಗರ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿ ಡಾ.ಅನಿತಾ ಜಾಧವ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಡಿ.ಡಿ.ಪಿ.ಯು ಅಶೋಕ ಶಾಸ್ತ್ರಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬ್ಳೆ, ಡಿ.ಪಿ.ಎಂ. ವೀರೇಶ ಜವಳಗಿ, ಸಮಾಲೋಚಕ ಮಂಜುನಾಥ ಕಂಬಳಿಮಠ ಸೇರಿ ಅನೇಕರು ಇದ್ದರು.
ಆರ್.ಸಿ.ಎಚ್.ಓ ಡಾ.ಸಿದ್ರಾಮಪ್ಪ ಪಾಟೀಲ ಸ್ವಾಗತಿಸಿದರು. ಡಿ.ಎಚ್.ಓ ಡಾ.ಶರಣಬಸಪ್ಪ ಖ್ಯಾತನಾಳ ವಂದಿಸಿದರು.