ಜಿಲ್ಲೆ

ಮಳೆಗಾಲ ಶುರುವಾದರೂ ತಪ್ಪದ ನೀರಿನ ಅಭಾವ

ಪಪಂ ವ್ಯಾಪ್ತಿಯ 29 ವಾರ್ಡ್‌ಗಳಲ್ಲಿ ಹಾಹಾಕಾರ- ಮಳೆ ಹಾನಿ ಸಮಸ್ಯೆ

ಪಪಂ ವ್ಯಾಪ್ತಿಯ 29 ವಾರ್ಡ್‌ಗಳಲ್ಲಿ ಹಾಹಾಕಾರ- ಮಳೆ ಹಾನಿ ಸಮಸ್ಯೆಗೂ ಜಿಲ್ಲಾಡಳಿತದಿಂದ ಕ್ರಮ



ಚಿಕ್ಕಬಳ್ಳಾಪುರ: ಮಳೆಗಾಲ ಶುರುವಾದರೂ ಜಿಲ್ಲೆಯ ಹಲವು ಗ್ರಾಮಗಳು ಮತ್ತು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಹಾಹಾಕಾರವಿದ್ದು, ಸಮಸ್ಯೆ ನೀಗಿಸಲು ಜಿಲ್ಲಾಡಳಿತದಿಂದ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ.
34 ಗ್ರಾಪಂ ವ್ಯಾಪ್ತಿಯ 45 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸದಾಗಿ 51 ಗ್ರಾಪಂ ವ್ಯಾಪ್ತಿಯ 92 ಹಳ್ಳಿಗಳಲ್ಲಿ ಸಮಸ್ಯೆ ಉದ್ಭವಿಸಲಿದೆ. ಹಾಗೆಯೇ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 29 ವಾರ್ಡ್‌ಗಳಲ್ಲಿ ಹಾಹಾಕಾರ ಇದೆ. ಮುಂಬರುವ ದಿನಗಳಲ್ಲಿ ಹೊಸದಾಗಿ 24 ವಾರ್ಡ್‌ಗಳಲ್ಲಿ ಸಮಸ್ಯೆ ಕಾಡಲಿದೆ (ಜೂ.6 ಅಂತ್ಯಕ್ಕೆ) ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಬಾಡಿಗೆಗೆ ಕೊಳವೆ ಬಾವಿ
ಸಮಸ್ಯಾತ್ಮಕ ಪ್ರದೇಶಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 46 ಮತ್ತು ನಗರ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 20 ಕಡೆ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚುವರಿಯಾಗಿ 61 ಮತ್ತು ನಗರ ವ್ಯಾಪ್ತಿಯಲ್ಲಿ 24 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಟ್ಯಾಂಕರ್ ನೀರಿನ ವ್ಯವಸ್ಥೆಯ ಅಗತ್ಯ ಬಿದ್ದಿಲ್ಲ. ಇನ್ನು ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ಸಮಸ್ಯೆ ಪರಿಹಾರ ಕಾಣಲಿದೆ.


ತಗ್ಗಿದೆ ನೀರಿನ ಅಭಾವ
ಮಳೆಗಾಲದಲ್ಲಿ ನೀರಿನ ಸಮಸ್ಯೆ ಹಂತಹಂತವಾಗಿ ಕಡಿಮೆಯಾಗುತ್ತಿದೆ. ಮೊದಲು 100ಕ್ಕೂ ಹೆಚ್ಚು ಗ್ರಾಮಗಳು ಮತ್ತು 40ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಸಮಸ್ಯೆ ಇತ್ತು. ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗೌರಿಬಿದನೂರಿನಲ್ಲಿ ಬಹುತೇಕ ಕೊಳವೆಬಾವಿ ನೀರನ್ನು ಆಶ್ರಯಿಸಲಾಗಿದೆ. ಇನ್ನು ಚಿಕ್ಕಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯ ಮತ್ತು ಗುಡಿಬಂಡೆ ಪಟ್ಟಣಕ್ಕೆ ಅಮಾನಿ ಭೈರಸಾಗರ ಕೆರೆಯಿಂದ ನೀರು ಪೂರೈಕೆಯಾಗುತ್ತಿದೆ.


ಜಿಲ್ಲಾ ಕಾರ್ಯದರ್ಶಿ ಸೂಚನೆ
ಒಂದೆಡೆ ನೀರಿನ ಅಭಾವವಿದ್ದರೂ ಇತ್ತೀಚೆಗೆ ಬಿದ್ದ ಮಳೆಯಿಂದ ಸಾಕಷ್ಟು ಹಾನಿಯೂ ಉಂಟಾಗಿದೆ. ಸಮರ್ಪಕ ನೀರು ಪೂರೈಕೆ ಜತೆಗೆ ಮಳೆ ಹಾನಿ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳಾ ಮತ್ತು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಳೆಹಾನಿ ಪರಿಹಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ರೈತರಿಗೆ ತ್ವರಿತವಾಗಿ ಬೆಳೆ ನಷ್ಟ ಪರಿಹಾರ, ಕೃಷಿ ಚಟುವಟಿಕೆಗೆ ಅಗತ್ಯ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆ, ಮಳೆ ಹಾನಿ ಪ್ರಕರಣ ವರದಿಯಾದಲ್ಲಿ ತಕ್ಷಣ ಪರಿಹಾರ ಕೆಲಸಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.


ನಡೆಯದ ಸಚಿವರ ಸಭೆ
ಜಿಲ್ಲೆಯಲ್ಲಿ ಮಳೆಹಾನಿ ಪ್ರಕರಣಗಳು ವರದಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಸಮಸ್ಯೆ ಕಾಡುತ್ತಿದೆ. ಇದರ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಕೆಡಿಪಿ ಸಭೆ ನಡೆದಿಲ್ಲ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲೂ ಸಭೆಗಳನ್ನು ಕೈಗೊಂಡು ಚರ್ಚಿಸಬೇಕಾಗಿದೆ. ಈಗಾಗಲೇ ಲೋಕಸಭಾ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದಿದೆ. ಇದರಿಂದ ಸಂಬಂಧಪಟ್ಟ ಸ್ಥಳೀಯ ಜನ ಪ್ರತಿನಿಧಿಗಳು ಆಡಳಿತ ಯಂತ್ರಾಂಗಕ್ಕೆ ಚುರುಕು ಮುಟ್ಟಿಸಬೇಕಾಗಿದೆ.

ತಾಲೂಕು ಹಾಲಿ ಸಮಸ್ಯಾತ್ಮಕ ಗ್ರಾಮಗಳು ನಿರೀಕ್ಷೆಯ ಸಮಸ್ಯಾತ್ಮಕ ಗ್ರಾಮಗಳು
ಚಿಕ್ಕಬಳ್ಳಾಪುರ 15 17
ಚಿಂತಾಮಣಿ 10 18
ಬಾಗೇಪಲ್ಲಿ 4 4
ಚೇಳೂರು 4 3
ಶಿಡ್ಲಘಟ್ಟ 10 1
ಗೌರಿಬಿದನೂರು 1 13
ಮಂಚೇನಹಳ್ಳಿ - 1
ಗುಡಿಬಂಡೆ 1 31
ಒಟ್ಟು 45 92