ಪಾಂಡವಪುರ ಪಟ್ಟಣದ ನೀರಾವರಿ ನಿಗಮದ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎಚ್.ಎನ್.ಮಂಜುನಾಥ್, ದೊರೆಸ್ವಾಮಿ, ನಿರಂಜನ್ ಇತರರು ಇದ್ದರು.  
ಜಿಲ್ಲೆ

ಕೆಆರ್‌ಎಸ್ ಭರ್ತಿಯಾದರೂ ನಾಲೆಗಳಿಗಿಲ್ಲ ನೀರು

ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದ್ದರೂ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಇದರಿಂದ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿ ರೈತರು ಕಾವೇರಿ ನೀರಾವರಿ ನಿಗಮ ಕಚೇರಿ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ವಿಶ್ವೇಶ್ವರಯ್ಯ ಮತ್ತು ಚಿಕ್ಕದೇವರಾಜ ಅರಸು (ಸಿಡಿಎಸ್) ನಾಲೆಗಳಿಗೆ ನೀರು ಹರಿಸದೆ ನಿಗಮದ ಅಧಿಕಾರಿಗಳು ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ರೈತರು ತಾವು ಬೆಳೆದ ಬೆಳೆ ಕೈಗೆ ಸಿಗುತ್ತದೆ ಎಂಬ ಆಶಾಭಾವನೆಯಿಂದ ಲಕ್ಷಾಂತರ ರೂ. ಸಾಲ ಮಾಡಿ ವ್ಯವಸಾಯ ಮಾಡಿದ್ದಾರೆ. ತಕ್ಷಣಕ್ಕೆ ನಾಲೆಗಳಲ್ಲಿ ನೀರು ಹರಿಯದಿದ್ದರೆ ಬೆಳೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ರೈತರು ಹೋರಾಟದ ಹಾದಿ ಹಿಡಿದು ನೀರು ಪಡೆಯುವಂತಾಗಿದೆ ಎಂದು ಕಿಡಿಕಾರಿದರು.

ವಿಸಿ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಕಾರಣದಿಂದಾಗಿ ಗುತ್ತಿಗೆದಾರನ ಪ್ರಭಾವಕ್ಕೆ ಕಟ್ಟುಬಿದ್ದು ಅಧಿಕಾರಿಗಳು ನಾಲೆಗೆ ನೀರು ಹರಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಲೆ ಕಾಮಗಾರಿಗೆ ಗುತ್ತಿಗೆದಾರ ವೆಚ್ಚ ಮಾಡುತ್ತಿರುವುದು 200 ಕೋಟಿ ರೂ. ಆಗಿರಬಹುದು. ಆದರೆ ವಿಸಿ ಮತ್ತು ಸಿಡಿಎಸ್ ನಾಲೆ ನೀರಿನ ಮೇಲೆ ಅವಲಂಬಿತರಾಗಿ ರೈತರು 2 ಸಾವಿರ ಕೋಟಿ ರೂ.ಗೂ ಅಧಿಕ ಬೆಳೆ ಬೆಳೆದಿದ್ದಾರೆ. ನಾಲೆಗಳಿಗೆ ನೀರು ಹರಿಸದಿದ್ದರೆ ಗುತ್ತಿಗೆದಾರನಿಂದ ಪ್ರತಿ ಎಕರೆಗೆ 40 ಸಾವಿರ ರೂ. ಪರಿಹಾರ ಕೊಡಿಸಲಿ. ಒಬ್ಬ ಗುತ್ತಿಗೆದಾರನಿಗೆ ನಷ್ಟವಾಗುವುದನ್ನು ತಪ್ಪಿಸುವುದಕ್ಕಾಗಿ ಅಧಿಕಾರಿಗಳು ರೈತರ ಬದುಕನ್ನು ಬಲಿ ಕೊಡುತ್ತಿದ್ದಾರೆ. ಆದರೆ, ಸಿಡಿಎಸ್ ನಾಲೆ ಆಧುನೀಕರಣ ನಡೆಯುತ್ತಿಲ್ಲವಾದರೂ ಯಾತಕ್ಕಾಗಿ ನೀರು ಹರಿಸಿಲ್ಲ ಎಂದು ರೈತರು ನಿಗಮದ ಎಇಇ ಎಲ್.ಶಿವಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ನಾಲೆಗಳಿಗೆ ನೀರು ಹರಿಸಬಹುದು ಎಂದು ರೈತರು ಸುಮ್ಮನಿದ್ದರು. ಅಣೆಕಟ್ಟೆ ತುಂಬಿ ತುಳುಕುತ್ತಿದ್ದರೂ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಸಾಲ ಮಾಡಿ ವ್ಯವಸಾಯ ಮಾಡುತ್ತಿರುವ ರೈತರು ಆತ್ಮಹತ್ಯೆ ಮತ್ತು ಹೃದಯಾಘಾತಕ್ಕೆ ಒಳಗಾಗಬಾರದು ಎಂದರೆ ತಕ್ಷಣ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ತಕ್ಷಣ ನೀರು ಹರಿಸಬೇಕು. ವಿಸಿ ನಾಲೆಗೆ ಕನಿಷ್ಠ ಒಂದು ಸಾವಿರ ಕ್ಯೂಸೆಕ್ ಹಾಗೂ ಸಿಡಿಎಸ್ ನಾಲೆಗೆ ಸಂಪೂರ್ಣವಾಗಿ ನೀರು ಹರಿಸದಿದ್ದರೆ ಪಾಂಡವಪುರ ಪಟ್ಟಣದ ಬಂದ್ ಮಾಡಿ ಹಗಲು- ರಾತ್ರಿ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ನಿಗಮದ ಎಇಇ ಎಲ್.ಶಿವಪ್ರಸಾದ್ ಮಾತನಾಡಿ, ವಿಸಿ ನಾಲಾ ವ್ಯಾಪ್ತಿಯ ಕುರಹಟ್ಟಿ ಸಮೀಪ ನಾಲೆಗೆ ಗೇಟ್ ಅಳವಡಿಸುತ್ತಿರುವ ಕಾರಣ ಹಾಗೂ ಕೆಲ ತಾಂತ್ರಿಕ ತೊಂದರೆಯಿಂದ ನಾಲೆಗೆ ನೀರು ಹರಿಸುವುದು ತಡವಾಗಿದೆ. ಕಾಮಗಾರಿ ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪ್ರತಿಭಟನಾಕಾರರು ಒಪ್ಪದ ಕಾರಣ ಕಾಮಗಾರಿ ಸ್ಥಳ ಪರಿಶೀಲಿಸಿ ವಾಸ್ತವತೆ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಒಂದು ವೇಳೆ ನಾಳೆಯೊಳಗಾಗಿ ನೀರು ಹರಿಸದಿದ್ದರೆ ಕಚೇರಿ ಮುಂದೆ ಶಾಮಿಯಾನ ಹಾಕಿ ಎತ್ತಿನ ಗಾಡಿ, ಹಸು, ಕರುಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಹೇಳಿ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ರೈತ ಮುಖಂಡರಾದ ಹಿರೇಮರಳಿ ದೊರೆಸ್ವಾಮಿ, ಎಣ್ಣೆಹೊಳೆಕೊಪ್ಪಲು ನಿರಂಜನ್, ಹೌಸಿಂಗ್ ಬೋರ್ಡ್ ನಿರ್ದೇಶಕ ಎನ್.ಭಾಸ್ಕರ್, ಡಾಮಡಹಳ್ಳಿ ಕೇಶವ, ಪುಟ್ಟೇಗೌಡ, ನೆಲಮನೆ ಗ್ರಾಮದ ರೈತರು ಸೇರಿದಂತೆ ಇತರರು ಇದ್ದರು.