ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಅನಿಸಿಕೆ
ರಾಮನಗರ
ಪ್ರತಿ ತಿಂಗಳು ಲೋಕಸಿರಿ ತಿಂಗಳ ಅತಿಥಿ ಕಾರ್ಯಕ್ರಮದ ಮೂಲಕ ಎಲೆಮರೆಯಲ್ಲಿರುವ ಜಾನಪದದ ಹಿರಿಯ ಕಲಾವಿದರನ್ನು ಗುರುತಿಸಿ ಅವರ ಆಲೋಚನೆ, ಕಲೆಯನ್ನು ದಾಖಲಿಸಲಾಗುತ್ತಿದೆ ಎಂದು ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.
ನಗರ ಹೊರವಲಯದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸೋಬಾನೆ ಕಲಾವಿದೆ ಮಂಡ್ಯ ಜಿಲ್ಲೆ, ದುದ್ದ ಹೋಬಳಿ ಮಲ್ಲನಾಯ್ಕನಕಟ್ಟೆಯ ಸಾಕಮ್ಮ ಅವರನ್ನು ಗೌರವಿಸಿ ಮಾತನಾಡಿದ ಬೋರಲಿಂಗಯ್ಯ ಅವರು, ಈ ಹಿಂದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನೇಕ ಕಲಾವಿದರು ನಮ್ಮನ್ನು ಅಗಲಿದ್ದಾರೆ. ಆದರೆ ಅವರಾಡಿದ ಮನದಾಳದ ಮಾತುಗಳು ಇಂದಿಗೂ ದಾಖಲಾಗಿವೆ ಎಂದರು.
ಪತ್ರಕರ್ತ ಪಿ.ವೈ.ರವೀಂದ್ರ ಹೇರ್ಳೆ ಮಾತನಾಡಿ, ಅರಣ್ಯದಿಂದ ಕೂಡಿದ್ದ ಈ ಜಾಗ ಇಂದು ದೇಶಕ್ಕೆ ಮಾದರಿಯಾಗಿ ಬೆಳೆದಿದೆ. ಇಂದಿನ ಪೀಳಿಗೆ ಆಧುನಿಕ ಮಾಧ್ಯಮಗಳ ಹಾವಳಿಗೆ ಸಿಕ್ಕು ಜಾನಪದ ಸೊರಗುವಂತಾಗಿದೆ. ಪಾಲಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಮುಂದಿನ ಪೀಳಿಗೆಗೂ ಜಾನಪದ ಉಳಿಯುತ್ತದೆ ಎಂದರು.
ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮಾತನಾಡಿ, ಇದು ಸರಳ ಕಾರ್ಯಕ್ರಮವಾದರೂ ಮುಂದಿನ ತಲೆಮಾರಿಗೆ ಇವರ ದಾಖಲೆಗಳು ಅಮೂಲ್ಯವಾದುದ್ದು. ಹೀಗೆ ಸಾವಿರಾರು ಕಲಾವಿದರನ್ನು ಗುರುತಿಸಿ ಸಾ‘ನೆಗಳನ್ನು ದಾಖಲಿಸುವ ಕಾರ್ಯವನ್ನು ಜಾನಪದ ಪರಿಷತ್ತು ಮಾಡುತ್ತದೆ, ಇದೇ ಕೊನೆಯಲ್ಲ ಎಂದರು.
ಉಪನ್ಯಾಸಕ ಡಾ.ಎಸ್.ರಾಮಲಿಂಗೇಶ್ವರ ಮಾತನಾಡಿ, ತೊಂಬತ್ತರ ದಶಕದಲ್ಲಿ ನಾನು ಅಂಧರ ಶಾಲೆಯಲ್ಲಿದ್ದಾಗ ಜಾನಪದ ಲೋಕ ನೋಡಿದ್ದೆ, ಆದರೆ ಈ ಮಟ್ಟಕ್ಕೆ ಜಾನಪದ ಲೋಕ ಬೆಳೆಯಲು ನಾಗೇಗೌಡರು ಬಹಳ ಶ್ರಮಪಟ್ಟಿದ್ದಾರೆ. ಗೌಡರು ಸೊಪ್ಪುಸಾರು ಮುದ್ದೆ ತುಂಬಾ ಇಷ್ಟಪಡುತ್ತಿದ್ದರು. ಊರೂರು ಸುತ್ತಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಹಾಡುಗಳ ಧ್ವನಿ ಮುದ್ರಣ ಮಾಡಿದ್ದಾರೆ. ಸಿರಿಗಂಧ ಧಾರವಾಹಿ ಮೂಲಕ ಜಾನಪದವನ್ನು ಲೋಕಕ್ಕೆ ಪರಿಚಯಿಸಿದರು ಎಂದು ಸ್ಮರಿಸಿದರು.
ಗೌರವ ಸ್ವೀಕರಿಸಿದ ಸಾಕಮ್ಮ ತಂಡದವರಾದ ಭಾಗ್ಯಮ್ಮ, ದೇವಮ್ಮ, ಶಾಂತಮ್ಮ ಸುಮಧುರವಾದ ಗೀತೆಗಳನ್ನು ಹಾಡಿದರು. ಮದುವೆ ಶಾಸ್ತ್ರದ ಆಚರಣೆಯಲ್ಲಿ ಬರುವ ಇಳ್ಳೇವು ಶಾಸ್ತ್ರ, ಎಣ್ಣೆಶಾಸ್ತ್ರ, ಅಕ್ಕಿ ಇಕ್ಕೋಶಾಸ್ತ್ರ, ಕಂಕಣ ಕಟ್ಟೊ ಶಾಸ್ತ್ರ, ಜರಿಯೋ ಪದ, ದಾರೆ ಪದ, ಲ್ದನ್ನ ಶಾಸ್ತ್ರ, ಮಡಲಕ್ಕಿ ಶಾಸ್ತ್ರ ಸಂಪ್ರದಾಯದ ಸೋಬಾನೆ ಗೀತೆಗಳನ್ನು ಹಾಡಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಚಿಕ್ಕಪುಟ್ಟೇಗೌಡ, ಸಾಹಿತಿ ಕೂರಣಗೆರೆ ಕೃಷ್ಣಪ್ಪ, ನಾಗಭೂಷಣ್ ಉಪಸ್ಥಿತರಿದ್ದರು. ಕ್ಯೂರೇಟರ್ ಡಾ.ರವಿ, ಪ್ರದೀಪ್.ಎಸ್, ಡಾ.ಸಂದೀಪ್.ಕೆ.ಎಸ್ ಮುಂತಾದವರು ಇದ್ದರು.