ಮಂಗಳೂರು: ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟ ಕಂಕನಾಡಿ ನಗರ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಹರೀಶ್ ಜಿ.ಎನ್. ಅವರ ಅಂಗಾಂಗಗಳನ್ನು ಮೂವರು ರೋಗಿಗಳಿಗೆ ಕಸಿ ಮಾಡಲಾಗಿದ್ದು, ಹರೀಶ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕು ಗ್ಯಾನಹಳ್ಳಿ ಗ್ರಾಮದ ಹರೀಶ್ ಜಿ.ಆರ್. (30) ಅವರು ಫೆ.2ರಂದು ವಿವಾಹ ನಿಶ್ಚಿತಾರ್ಥ ಮುಗಿಸಿ ಫೆ.5ರಂದು ಬೈಕ್‌ನಲ್ಲಿ ಕರ್ತವ್ಯಕ್ಕೆ ಮರಳುತ್ತಿದ್ದಾಗ ಸುಳ್ಯ ತಾಲ್ಲೂಕಿನ ಅರಂತೋಡು ಬಳಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ.9ರಂದು ರಾತ್ರಿ 8.18ಕ್ಕೆ ಅವರ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ವೈದ್ಯರು ಘೋಷಿಸಿದ್ದರು.
*ಅಂಗಾಂಗ ದಾನ ಮಾಡುವ ನಿರ್ಧಾರ
ವೈದ್ಯರ ಸಮಾಲೋಚನೆಯ ನಂತರ ಹರೀಶ್ ತಾಯಿ ರೇಣುಕಮ್ಮ ಅವರು ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡರು. ಅದರಂತೆ ಹರೀಶ್ ಅವರ ಒಂದು ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಯಿತು. ಇನ್ನೊಂದು ಮೂತ್ರಪಿಂಡವನ್ನು ಕಸಿ ಮಾಡಲು ನಗರದ ಕೆ.ಎಂ.ಸಿ. ಆಸ್ಪತ್ರೆಗೆ ಕಳುಹಿಸಲಾಯಿತು. ಮೂವರು ರೋಗಿಗಳಿಗೆ ಅಂಗಾಂಗ ಕಸಿ ಯಶಸ್ವಿಯಾಗಿ ನೆರವೇರಿದ್ದು, ಹರೀಶ್ ಅವರು ಸಾವಿನಲ್ಲೂ ಪರರ ಜೀವ ಉಳಿಸಿದ್ದಾರೆ.
ಹರೀಶ್ ಅವರು ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಗಾಯನಹಳ್ಳಿ ನಿವಾಸಿಯಾಗಿದ್ದು, ಮದುವೆಯಾಗಲು ಹೆಣ್ಣು ನೋಡಿ ನಿಶ್ಚಯವೂ ಆಗಿತ್ತು. ಅಷ್ಟರಲ್ಲಿಯೇ ದುರ್ವಿಧಿಗೆ ಬಲಿಯಾಗಿದ್ದು, ಇಹಲೋಕ ತ್ಯಜಿಸಿದ್ದಾರೆ. 2016ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ಅವರು, ಮಂಗಳೂರಿನಲ್ಲಿ ಪಾಂಡೇಶ್ವರ, ಆ ಬಳಿಕ ಕಂಕನಾಡಿ ಠಾಣೆಯಲ್ಲಿ ಒಂದು ವರ್ಷದಿಂದ ಕರ್ತವ್ಯದಲ್ಲಿದ್ದರು.