ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ ನಾಗರಿಕರಾದ ನಿಂಗಯ್ಯ ಬಸಯ್ಯ ಒಡೆಯರ ಹಾಗೂ ಪಿ. ಎಂ. ಮಡಿವಾಳ ಎಂಎ ಇಂಗ್ಲಿಷ್ ಪರೀಕ್ಷೆ ಬರೆದರು.  
ಜಿಲ್ಲೆ

ಇಳಿಯಸ್ಸಿನಲ್ಲೂ ಬತ್ತದ ಕಲಿಕೋತ್ಸಾಹ, ಸ್ನಾತಕೋತ್ತರ ಪರೀಕ್ಷೆ ಬರೆದು ಯುವಜನತೆಗೆ ಸ್ಪೂರ್ತಿಯಾದ ವೃದ್ಧರು

ವಿಜಯಪುರ: ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಇಳಿವಯಸ್ಸಿನಲ್ಲಿಯೂ ಎಂಎ ಇಂಗ್ಲಿಷ್ ಪರೀಕ್ಷೆ ಎದುರಿಸಿದ ಅಪರೂಪದ ಘಟನೆಯೇ ಸಾಕ್ಷಿ !
ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎಸ್ ಮಹಾವಿದ್ಯಾಲಯದಲ್ಲಿ ಶುಕ್ರವಾರ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಕೇಂದ್ರ ಆಯೋಜಿಸಿದ್ದ ಎಂಎ ಇಂಗ್ಲಿಷ್ ಪರೀಕ್ಷೆಗೆ 83 ಮತ್ತು 68 ವರ್ಷದ ಪರೀಕ್ಷಾರ್ಥಿಗಳು ಪರೀಕ್ಷೆ ಎದುರಿಸಿ ಗಮನ ಸೆಳೆದರು.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಗುಡೂರಿನ 83 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿಯ 68 ವರ್ಷದ ಪಿ.ಎಂ. ಮಡಿವಾಳ ಹಾಗೂ ನಾಲ್ಕೈದು ವರ್ಷದಲ್ಲಿ ಸೇವಾ ನಿವೃತ್ತಿಯಾಗಲಿರುವ ಶಿವಮೊಗ್ಗದ 55 ವರ್ಷದ ಕಲಾ ಶಿಕ್ಷಕ ನಾಗನಗೌಡ ಎ. ಪಾಟೀಲ ಪರೀಕ್ಷೆ ಬರೆದು ಯುವಕರನ್ನು ನಾಚಿಸಿದರು.

ಪರೀಕ್ಷೆ ಬಳಿಕ ಮಾತನಾಡಿದ 83 ವಯಸ್ಸಿನ ನಿಂಗಯ್ಯ ಬಸಯ್ಯ ಒಡೆಯರ, ನಾನೊಬ್ಬ ಆರೋಗ್ಯ ಇಲಾಖೆಯ ನಿವೃತ್ತ ನೌಕರ. 2000ನೇ ಇಸವಿಯಲ್ಲಿ ನಿವೃತ್ತಿಯಾಗಿದ್ದೇನೆ. ನಾನು ಬಡತನದಿಂದ ಬಂದಿದ್ದೇನೆ. ಸಾಹಿತ್ಯ ರಚನೆ ಮಾಡಿದ್ದೇನೆ. 15 ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ಹಿಂದಿ, ಇಂಗ್ಲಿಷ್, ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತ ಸಾಹಿತ್ಯವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನಗೆ ವಯಸ್ಸಾದರೂ ಆಸಕ್ತಿ ಕಡಿಮೆಯಾಗಿಲ್ಲ. ಯಾವಾಗ ನಾವು ಕಲಿಯುವುದನ್ನು ಬಿಡುತ್ತೇವೋ ಆವಾಗ ಅದು ಕಬ್ಬಿಣ ತುಕ್ಕು ಹಿಡಿದಂತಾಗುತ್ತದೆ. ಹೀಗಾಗಿ ಆಗಾಗ ಚರ್ಚೆ, ಅಧ್ಯಯನ, ಪರೀಕ್ಷೆ, ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡರೆ ಜ್ಞಾಪಕ ಶಕ್ತಿ ಬೆಳೆಯುತ್ತದೆ. ಇದು ನಾನು ಬರೆಯುತ್ತಿರುವ ಐದನೇ ಪರೀಕ್ಷೆಯಾಗಿದೆ. ಈಗಾಗಲೇ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಸಮಾಜ ಶಾಸ್ತ್ರ ವಿಷಯಗಳಲ್ಲಿ ಎಂಎ ಮಾಡಿದ್ದೇನೆ. 1956ರಲ್ಲಿ ನಾನು ಮೊದಲು ಶಾಲೆಗೆ ಸೇರಿ ಒಂದನೇ ತರಗತಿಯಲ್ಲಿ ಪರೀಕ್ಷೆ ಬರೆದೆ. ಅದೇ ಉತ್ಸಾಹ ಈಗಲೂ ಇದೆ ಎಂದರು.

ಸಿಂದಗಿಯ ನಿವೃತ್ತ ಉಪನ್ಯಾಸಕ ಪಿ. ಎಂ. ಮಡಿವಾಳ ಮಾತನಾಡಿ, ಈಗ ನನಗೆ 68 ವರ್ಷ ವಯಸ್ಸಾಗಿದೆ. ನನ್ನ ಮಗಳು ಈ ಮುಂಚೆ ಇಗ್ನೋದಿಂದ ಪರೀಕ್ಷೆಗೆ ಅರ್ಜಿ ಸಲ್ಲಿಸಿದಾಗ ನಾನೂ ಕೂಡ ಅವಳೊಂದಿಗೆ ಅರ್ಜಿ ಹಾಕಿದೆ. ಇಗ್ನೋ ಉತ್ತಮವಾಗಿ ಪರೀಕ್ಷೆ ನಡೆಸುತ್ತಿದ್ದು, ಎಲ್ಲ ಪರೀಕ್ಷಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಓರ್ವ ಪ್ರಾಧ್ಯಾಪಕನಾಗಿ ದಿನನಿತ್ಯ ಅಧ್ಯಯನಶೀಲನಾಗಿರಬೇಕು. ಜ್ಞಾನ ಸಂಪಾದನೆ ಮಾಡಬೇಕು. ಹೊಸ ಹೊಸ ಪುಸ್ತಕಗಳನ್ನು ಓದುವುದು, ಸಂಶೋಧನೆಗಳ ಬಗ್ಗೆ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬಹುದು ಎಂದರು.

ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮತ್ತು ಇಗ್ನೊ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಕೋರಿ, ಇಗ್ನೊ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ರವಿಕಾಂತ ಕಮಲೇಕರ, ಮೇಲ್ವಿಚಾರಕಿ ಡಾ. ಭಾರತಿ ವೈ. ಖಾಸನೀಸ್ ಮತ್ತಿತರರಿದ್ದು, ಹಿರಿಯ ಪರೀಕ್ಷಾರ್ಥಿಗಳಿಗೆ ಶುಭಕೋರಿದರು.