ಆರ್.ತುಳಸಿಕುಮಾರ್
ಬೆಂಗಳೂರು: ಬಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೆ ರೋಗ ಉಲ್ಬಣಿಸುತ್ತಿದ್ದಂತೆ ಆಯಾ ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಔಷಧ ಸಿಂಪಡಣೆ, ಫಾಗಿಂಗ್ ಮಾಡಲಾಯಿತು. ಆದರೆ, ಪುಲಿಕೇಶನಗರ ಮತಕ್ಷೇತ್ರದಲ್ಲಿ ಮನೆ ಮನೆ ಸಮೀಕ್ಷೆ ಇರಲಿ, ರಸ್ತೆಬದಿ ಬಿದ್ದಿರುವ ಕಸದ ರಾಶಿಯನ್ನೇ ತೆರವು ಮಾಡಿಲ್ಲ. ಕ್ಷೇತ್ರದ ಮುಕ್ಕಾಲು ಭಾಗದಲ್ಲಿ ತ್ಯಾಜ್ಯ ಸಮಸ್ಯೆ ಜನರನ್ನು ಕಾಡುತ್ತಿದ್ದರೂ, ಪಾಲಿಕೆ ಮಾತ್ರ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.
ಕ್ಷೇತ್ರದ ಪ್ರತಿ ವಾರ್ಡ್‌ನಲ್ಲೂ ಕಸ ವಿಲೇವಾರಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮೇಲ್ವಿಚಾರಕರನ್ನೂ ನೇಮಿಸಲಾಗಿದೆ. ಆದರೂ, ಇವರೆಲ್ಲರೂ ಕಸ ವಿಲೇವಾರಿ ಮೇಲೆ ನಿಗಾ ಇಡದ ಕಾರಣ ಕಂಡಲೆಲ್ಲ ಕಸದ ರಾಶಿ ಕಣ್ಣಿಗೆ ರಾಚುವಂತಿದೆ. ರಸ್ತೆಬದಿ, ಖಾಲಿ ಸೈಟ್‌ಗಳಲ್ಲಿ ಎಲ್ಲ ಬಗೆಯ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಮನೆ ಮುಂದೆ ಗುಡಿಸಿದ ಕಸವನ್ನು ನೇರವಾಗಿ ಚರಂಡಿಗೆ ಅಥವಾ ರಾಜಕಾಲುವೆಗೆ ಎಸೆಯುವ ಕೆಟ್ಟ ಚಾಳಿ ಜನರಲ್ಲಿ ನೈರ್ಮಲ್ಯದ ಬಗೆಗಿರುವ ಕಾಳಜಿಗೆ ಕೈಗನ್ನಡಿ ಹಿಡಿದಂತಿದೆ.
ಕುಶಾಲನಗರ, ಮುನೇಶ್ವರನಗರ, ಎಸ್.ಕೆ.ಗಾರ್ಡನ್, ಡಿ.ಜೆ.ಹಳ್ಳಿ ವಾಡ್‌ಗಳಲ್ಲಿ ನೈರ್ಮಲ್ಯವನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಇದೆ. ಮುಖ್ಯರಸ್ತೆ ಬದಿಯಲ್ಲೇ ಕಸದ ರಾಶಿ ಇದ್ದರೂ, ತೆರವು ಮಾಡಿಲ್ಲ. ಇಲ್ಲೇ ಮತ್ತೆ ಜನರು ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಶಾಂಪುರ ರೈಲ್ವೆ ಗೇಟ್ ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ ಇದ್ದರೂ, ವಿಲೇವಾರಿ ಆಗದೆ ತಿಂಗಳು ಕಳೆದಿದೆ. ಬೇರೆಡೆ ನಿಯಮಿತವಾಗಿ ಕಸ ವಿಲೇವಾರಿ ಮಾಡುತ್ತಿರುವಾಗ ನಮ್ಮಲ್ಲೇಕೆ ಇಂತಹ ಸ್ಥಿತಿ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಸಿಬ್ಬಂದಿಗಳ ಸುಳಿವೇ ಇಲ್ಲ:
ಕಸದ ಸಮಸ್ಯೆ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ಎಲ್ಲೆಡೆ ದೂರುವುದು ಸಾಮಾನ್ಯವಾಗಿಬಟ್ಟಿದೆ. ಹಿರಿಯ ಅಧಿಕಾರಿಗಳ ಸಹಿತ ಕೆಳ ಹಂತದ ಸಿಬ್ಬಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಕಸ ತೆಗೆಯುತ್ತಾರೆ ವಿನಾ ನಿತ್ಯ ಕಸ ಗುಡಿಸುವವರನ್ನು ನಾವು ನೋಡಿಯೇ ಇಲ್ಲ. ಪೌರಕಾರ್ಮಿಕರ ಸಂಖ್ಯೆ ಸಾಕಷ್ಟು ಇದ್ದಾರೆಂದು ಅಧಿಕಾರಿಗಳು ಹೇಳುತ್ತಿದ್ದರೂ, ರಸ್ತೆಗಳಲ್ಲಿ ಕಸದ ರಾಶಿ ಏಕೆ ಇದೆ ಎಂದು ಡಿ.ಜೆ.ಹಳ್ಳಿಯ ರಶೀದ್ ಪ್ರಶ್ನಿಸಿದ್ದಾರೆ.
ರಾಜಕಾಲುವೆಗಳಲ್ಲಿ ಹೂಳೆತ್ತದೆ ಸಮಸ್ಯೆ:
ಕ್ಷೇತ್ರದಲ್ಲಿ ಹಾದುಹೋಗಿರುವ ರಾಜಕಾಲುವೆಗಳು ಇಲ್ಲಿನ ನಿವಾಸಿಗಳಿಗೆ ಭಯವುಂಟು ಮಾಡುವಂತಿದೆ. ಜನರು ಕಸವನ್ನು ಕಾಲುವೆಗಳಿಗೆ ಹಾಕುವುದರಿಂದ ಹೂಳು ಹೆಚ್ಚಿದೆ. ಇದನ್ನು ಸ್ವಚ್ಚ ಮಾಡಬೇಕಿದ್ದ ಪಾಲಿಕೆ ಇತ್ತ ಗಮನ ಹರಿಸಿದಂತಿಲ್ಲ. ಕೆಲವೆಡೆ ಯಂತ್ರದಿಂದ ಹೂಳೆತ್ತುವ ಕೆಲಸ ಮಾಡುತ್ತಿದ್ದರೂ, ಅರ್ಧಕ್ಕೆ ನಿಂತಿದೆ. ಹಾಗಾಗಿ ಮಳೆ ಬಂದಲ್ಲಿ ತಗ್ಗು ಪ್ರದೇಶಗಳತ್ತ ನೀರು ನುಗ್ಗುತ್ತದೆ. ದುರ್ವಾಸನೆ ತಡೆಯಲಾಗದೆ ಜನರು ಪಾಲಿಕೆಗೆ ಹಿಡಿಶಾಪ ಹಾಕುವ ಪರಿಸ್ಥಿತಿ ಇದೆ.
ಬಸ್ ಸೌಕರ್ಯ ಕಲ್ಪಿಸಲು ಆಗ್ರಹ:
ಕೋವಿಡ್ ಸಾಂಕ್ರಾಮಿಕದ ಬಳಿಕ ಕುಶಾಲನಗರ, ಎಸ್.ಕೆ.ಗಾರ್ಡನ್ ವಾರ್ಡ್‌ಗಳಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗಳು ಸ್ಥಗಿತಗೊಂಡಿವೆ. ಶಾಂಪುರ ಮುಖ್ಯರಸ್ತೆಯಿಂದ ನಾಗವಾರ-ಟ್ಯಾನರಿ ರಸ್ತೆಗೆ ತೆರಳಲು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ನಿತ್ಯ ಕಿ.ಮೀ. ದೂರ ನಡೆದೇ ಹೋಗಬೇಕಿದೆ. ಆಟೋಗಳಿಗೆ ನಿತ್ಯ ಹಣ ನೀಡಲು ನಮ್ಮಲ್ಲಿ ದುಡ್ಡು ಇಲ್ಲ. ಬಸ್ ನಿಲ್ದಾಣಗಳು ಈಗ ಪುಂಡ ಪೋಕರಿಗಳ ಅಡ್ಡೆಯಾಗಿದೆ. ಸಂಜೆ ಬಳಿಕ ಮನೆಗೆ ತೆರಳಲು ಸಮಸ್ಯೆಯಾಗುತ್ತಿದೆ ಎಂದು ಶಾಂಪುರದ ನಟರಾಜ್ ‘ವಿಜಯವಾಣಿ’ಗೆ ತಿಳಿಸಿದರು.
ಇಡೀ ಕ್ಷೇತ್ರದಲ್ಲಿ ಕಸದ ಸಮಸ್ಯೆ ತಾಂಡವವಾಡುತ್ತಿದ್ದರೂ, ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ದೂರು ನೀಡಿದರೆ ಸ್ವಚ್ಚಗೊಳಿಸುವುದಾಗಿ ಹೇಳಿ ನಂತರ ಸುಳಿಯುವುದಿಲ್ಲ. ಶಾಸಕರಿಗೂ ವಿನಂತಿಸಿದ್ದರೂ ಸಮಸ್ಯೆ ಹಾಗೆಯೆ ಉಳಿದಿದೆ. ರಸ್ತೆಗಳೆಲ್ಲ ಗುಂಡಿಗಳು ಉಂಟಾಗಿದ್ದು, ಸಂಚಾರಕ್ಕೆ ಕಷ್ಟವಿದೆ. ಕುಡಿಯುವ ನೀರು ಹೊಂದಿಸಲು ಜನ ಪಡಬಾರದ ಕಷ್ಟಪಡುತ್ತಿದ್ದಾರೆ.
- ವಿ.ರವಿ, ಪುಲಿಕೇಶಿನಗರ ಮಂಡಲದ ಬಿಜೆಪಿ ಅಧ್ಯಕ್ಷ