ಬಾಳೆಹೊನ್ನೂರು: ಹೋಬಳಿಯಲ್ಲಿ ಮಂಗಳವಾರ ಅಬ್ಬರಿಸಿದ್ದ ಪುಷ್ಯ ಮಳೆ ಬುಧವಾರ ಕ್ಷೀಣಿಸಿ ಪ್ರವಾಹವೂ ತಗ್ಗಿದೆ. ಮಳೆ ಕಡಿಮೆಯಾದರೂ ಹಾನಿ ಮುಂದುವರಿದಿದೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ ಒಂದೇ ಸಮನೆ ಮಳೆ ಸುರಿದಿದ್ದರಿಂದ ಭದ್ರಾ ನದಿ ಪ್ರವಾಹದಿಂದ ಹಲವು ಅಂಗಡಿ ಮುಂಗಟ್ಟುಗಳು, ಮನೆ, ಜಮೀನುಗಳು ಜಲಾವೃತವಾಗಿದ್ದವು. ಮಂಗಳವಾರ ಸಂಜೆ ಮಳೆ ಕಡಿಮೆಗೊಂಡಿದ್ದರಿಂದ ನಿಧಾನವಾಗಿ ನೆರೆ ಕಡಿಮೆಯಾಗಿದ್ದು, ಮನೆ, ಅಂಗಡಿ, ತೋಟಗಳೆಲ್ಲ ಜಲದಿಗ್ಬಂಧನದಿಂದ ಮುಕ್ತವಾದವು.
ಖಾಂಡ್ಯ ಹೋಬಳಿಯ ಬಿದರೆ ಗ್ರಾಪಂ ಕೊಂಡದಖಾನ್‌ನಿಂದ ಕಡಬಗೆರೆಗೆ ತೆರಳುವ ಲಿಲ್ಲಿಖಾನ್-ಕೋಲಾರ್‌ಖಾನ್ ಮಧ್ಯೆ ರಸ್ತೆಗೆ ಗುಡ್ಡ ಜರಿದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಬಹೃತ್ ಬಂಡೆಗಳು ಉರುಳಿ ಬಿದ್ದಿವೆ. ಬಿ.ಕಣಬೂರು ಗ್ರಾಮದ ವಿವೇಕನಗರದ ಸುಂದರಿ ಕೃಷ್ಣಾಚಾರಿ ಎಂಬುವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸ ರಸ್ತೆಯ ಹೊಳೆಬಾಗಿಲು ಗ್ರಾಮದ ಹರಿಪ್ರಸಾದ್ ಎಂಬುವರ ಮನೆಯ ಕಾಂಪೌಂಡ್ ಕುಸಿದಿದೆ. ಪಿಡಿಒ ಕಾಶಪ್ಪ, ವಿಎ ಸಮೀಕ್ಷಾ ಸ್ಥಳ ಪರಿಶೀಲಿಸಿದರು.
ಮಂಗಳವಾರ ಸುರಿದ ಭಾರಿ ಮಳೆಗೆ ಗಡಿಗೇಶ್ವರದಲ್ಲಿ 5 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 12 ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳು ಬಿದ್ದಿವೆ. ಕೆಲವು ಗ್ರಾಮೀಣ ಭಾಗದಲ್ಲಿ ಒಂದೊಂದು ವಿದ್ಯುತ್ ಕಂಬಗಳು ತುಂಡಾಗಿದ್ದು, ಅವುಗಳನ್ನು ಸರಿಪಡಿಸಲಾಗುತ್ತಿದೆ. ಭಾರಿ ಗಾಳಿ ಪರಿಣಾಮ ಈ ಬಾರಿ ವಿದ್ಯುತ್ ಕಂಬಗಳಿಗೆ, ಲೈನ್‌ಗೆ ಹೆಚ್ಚು ಹಾನಿಯಾಗಿದೆ.
ಪಟ್ಟಣದ ಎನ್.ಆರ್.ಪುರ ರಸ್ತೆಯ ವಿನಾಯಕ ರೈಸ್‌ಮಿಲ್ ಮುಂಭಾಗದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ಮೂರು ಹಸುಗಳು ಸಾವನ್ನಪ್ಪಿವೆ. ಮಂಗಳವಾರ ಸಂಜೆ ಮೂರು ಹಸುಗಳು ಮೇವನ್ನು ಅರಸುತ್ತ ರೈಸ್ ಮಿಲ್ ಮುಂಭಾಗದ ಟಿಸಿ ಕೆಳಗೆ ತೆರಳಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿವೆ. ಬುಧವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮೆಸ್ಕಾಂ ಜೆಇ ಗಣೇಶ್ ಸ್ಥಳ ಪರಿಶೀಲಿಸಿದರು. ಮಂಗಳವಾರ ಅತಿಯಾದ ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಅನಾಹುತ ಸಂಭವಿಸಬಹುದು ಎಂಬ ಮುಂದಾಲೋಚನೆಯಿಂದ ಟಿಸಿಗೆ ವಿದ್ಯುತ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಲಾಖೆಯಿಂದ ಮಂಗಳವಾರ ಸಂಜೆ ಯಾವುದೇ ಫೀಡರ್ ಚಾರ್ಜ್ ಮಾಡಿರಲಿಲ್ಲ. ಆದರೆ ಈ ವೇಳೆ ಯಾವುದೋ ಮನೆ ಅಥವಾ ಅಂಗಡಿಯಲ್ಲಿ ಇನ್ವರ್ಟರ್, ಜನರೇಟರ್ ಆನ್ ಮಾಡಿದಾಗ ಅದರಿಂದ ವಿದ್ಯುತ್ ಹಿಮ್ಮುಖವಾಗಿ ಪ್ರವಹಿಸಿ ಸ್ಥಳದಲ್ಲಿ ಗ್ರೌಂಡಿಂಗ್ ಆಗಿ ಹಸುಗಳು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಜೆಇ ಗಣೇಶ್ ಹೆಳಿದ್ದಾರೆ. ಹಸುಗಳ ಮಾಲೀಕರು ದಾಖಲೆಗಳೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದಲ್ಲಿ ಸೂಕ್ತ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು. ಪಿಡಿಒ ಕಾಶಪ್ಪ, ವಿಎ ಸಮೀಕ್ಷಾ ಸ್ಥಳ ಪರಿಶೀಲಿಸಿದರು.