ಜಿಲ್ಲೆ

ಮತ್ತೊಮ್ಮೆ ಗಣತಿ ಮಾಡಿದರೂ ವೀರಶೈವರ ಸಂಖ್ಯೆ ಏರಿಕೆಯಾಗುವುದಿಲ್ಲ : ಸಚಿವ ಎಂ.ಬಿ. ಪಾಟೀಲ್

ಮೈಸೂರು: ಮತ್ತೊಮ್ಮೆ ಜಾತಿ ಜನಗಣತಿ ನಡೆಸಿದರೂ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆಯಲ್ಲಿ ಏರಿಕೆ ಕಾಣಲು ಸಾಧ್ಯವಿಲ್ಲ. ಮತ್ತೆ ಗಣತಿ ನಡೆದರೆ ಶೇ.1 ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಮೀಸಲಾತಿ ಪಡೆಯುವ ಉದ್ದೇಶದಿಂದ ಗಣತಿ ಸಂದರ್ಭ ಉಪ ಪಂಗಡ ವನ್ನು ಪ್ರತ್ಯೇಕವಾಗಿ ದಾಖಲಿಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

‘ವಿಜಯಾನಂದ್ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ನಡೆಯುತಿತ್ತು. ಆ ಸಂದರ್ಭ ಹೋರಾಟದ ಮುಂಚೂಣಿಯಲ್ಲಿ ಇದ್ದೆ. ನಾನು ಏತಕ್ಕೆ ಮುಂಚೂಣಿಯಲ್ಲಿ ಇದ್ದೆ? ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆತರೆ ಎಲ್ಲ ಉಪ ಪಂಗಡಗಳಿಗೆ ಸೌಲಭ್ಯ ದೊರೆಯುತ್ತದೆ ಎಂಬ ಕಾರಣಕ್ಕೆ ಹೋರಾಟದ ನೇತೃತ್ವ ವಹಿಸಿದ್ದೆ. ಲಿಂಗಾಯತರು ಹರಿದು ಹಂಚಿ ಹೋಗಿದ್ದಾರೆ. ಪ್ರಸ್ತುತ ವೀರಶೈವ ಲಿಂಗಾಯತರನ್ನು ‘ನೀನು ಯಾರು?’ ಎಂದು ಪ್ರಶ್ನಿಸಿದರೆ ಗಾಣಿಗ, ಸಾದರ, ಬಣಜಿಗ ಅನ್ನುತ್ತಾರೆ. ಜನಗಣತಿ ಸಂದರ್ಭ 2ಎ ಮೀಸಲಾತಿಗಾಗಿ ‘ಹಿಂದು ಗಾಣಿಗ’, ‘ಹಿಂದು ಸಾದರ,’, ‘ಹಿಂದು ಬಣಜಿಗ’ ಎಂದು ಬರೆಸಿದ್ದಾರೆ. ಸಾಕಷ್ಟು ಜನರು ವೀರಶೈವ ಲಿಂಗಾಯತ ಎಂದು ಬರೆಸಿಲ್ಲ. ಹೀಗಾಗಿ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿದೆ ಎಂದರು.

ಮೀಸಲಾತಿ ಉದ್ದೇಶ ಪಡೆಯಲು ವೀರಶೈವ ಲಿಂಗಾಯತದ ಉಪ ಪಂಗಡದವರು ಉಪ ಪಂಗಡದ ಹೆಸರನ್ನು ಜಾತಿ ಗಣತಿ ಸಂದರ್ಭ ನೀಡುತ್ತಿದ್ದಾರೆ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ದೊರೆತ್ತಿದ್ದರೆ ಎಲ್ಲ ಉಪ ಪಂಗಡಗಳು ಒಂದೇ ವೇದಿಕೆಯಡಿ ಬರುತಿತ್ತು. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಬಹಳಷ್ಟು ಜನರು ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಮತ್ತೊಮ್ಮೆ ಸಮೀಕ್ಷೆ ಮಾಡಿದರೆ ಹೆಚ್ಚೇನು ಆಗುವುದಿಲ್ಲ, ಮತ್ತೆ ಶೇ.1 ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಉಪ ಪಂಗಡಗಳಿಗೆ ಬೇಕಾಗಿರುವುದು ಮೀಸಲಾತಿ. ಉಪ ಪಂಗಡದ ಹೆಸರು ನೀಡಬೇಡಿ ಎಂದು ಯಾವುದೇ ಶ್ರೀಗಳು, ವೀರಶೈವ ಮಹಾಸಭಾದ ಮುಖಂಡರು ಕರೆ ನೀಡಿದರೂ ಜನರು ಯಾರ ಮಾತನ್ನು ಸಹ ಕೇಳುವುದಿಲ್ಲ. ಏಕೆಂದರೆ ಅವರಿಗೆ ಮೀಸಲಾತಿ ಮುಖ್ಯ. ಇದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಹೇಳಿದರು.

ಎಲ್ಲ ಉಪ ಪಂಗಡಗಳು ಒಂದೆಡೆ ಬಂದರೆ ಜನಸಂಖ್ಯೆಯಲ್ಲಿ ಶೇ.17 ರಷ್ಟು ವೀರಶೈವ ಲಿಂಗಾಯತರನ್ನು ಕಾಣಬಹುದು. ಉಪ ಪಂಗಡಗಳು ಹರಿದು ಹಂಚಿ ಹೋದರೆ ಈ ಸಮುದಾಯ ರಾಜಕೀಯ ಸಾಮರ್ಥ್ಯ ಸೇರಿದಂತೆ ಯಾವುದೇ ಸಾಮರ್ಥ್ಯ ಉಳಿಯುವುದಿಲ್ಲ. ವೀರಶೈವ ಲಿಂಗಾಯತ ಸಮುದಾಯಕ್ಕೆ ತನ್ನದೇ ಆದ ಭವ್ಯವಾದ ಇತಿಹಾಸವಿದೆ. ನಮ್ಮ ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುರೆಯಬೇಕು. ನಮ್ಮ ಮಠಗಳ ಕೊಡುಗೆಯಿಂದ ನಾವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುಂದುವರೆಯುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣತಿಯನ್ನೇ ಮಾಡಿಲ್ಲ

ಸಚಿವ ಎಂ.ಬಿ. ಪಾಟೀಲ್ ಮಾತನಾಡುತ್ತಿದ್ದ ಸಂದರ್ಭ ವೇದಿಕೆ ಏರಿದ ತಗಡೂರು ಗ್ರಾಮದ ನಾಗೇಂದ್ರ ಕುಮಾರ್ ಜಾತಿ ಗಣತಿ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರ ಜಾತಿ ಗಣತಿಯನ್ನೇ ನಡೆಸಿಲ್ಲ, ಗಣತಿ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಹರಿದು ಹಂಚಿ ಹೋಗಿರುವ ವೀರಶೈವ ಲಿಂಗಾಯತದ ಉಪ ಪಂಗಡಗಳು ಒಂದಾಗಬೇಕು. 2ಎ ಮೀಸಲಾತಿ ನಮಗೆ ಅವಶ್ಯಕತೆ ಇಲ್ಲ, ಸಮುದಾಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿದರೆ ಮೀಸಲಾತಿ ಅವಶ್ಯಕತೆ ಇಲ್ಲ’ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್, ಯಾವುದೇ ಸಮುದಾಯ ಅಭಿವೃದ್ಧಿ ಹೊಂದಿದರೆ ಅವರಿಗೆ ಮೀಸಲಾತಿಯ ಅವಶ್ಯಕತೆಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಜ್ಜೆ ಇಡಬೇಕು ಎಂಬ ಉತ್ತಮ ಸಂದೇಶವನ್ನು ನಾಗೇಂದ್ರ ಕುಮಾರ್ ಹೇಳಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್ಲರಿಗೂ ತಲುಪಬೇಕು

ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಕೇವಲ ಶ್ರೀಮಂತರು ಹಾಗೂ ಮಧ್ಯಮ ವರ್ಗದವರಿಗೆ ಮಾತ್ರ ಸೀಮಿ ತವಾಗಬಾರದು. ಈ ಸಂಘಟನೆಯ ಉದ್ದೇಶ ಗ್ರಾಮೀಣ ಭಾಗದ ಬಡ ಜನರಿಗೂ ತಲುಪಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಎಲ್ಲರನ್ನು ಒಗ್ಗೂಡಿಸಿ ಆರ್ಥಿಕವಾಗಿ ಅಭಿವೃದ್ಧಿಯತ್ತ ಹೆಜ್ಜೆ ಇರಿಸಬೇಕು. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವು ಪಡೆದುಕೊಳ್ಳಿ. ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ರಾಜಕೀಯವಾಗಿ ನಮ್ಮ ಸಮುದಾಯದ ನಾಯಕರು ವಿವಿಧ ಪಕ್ಷದಲ್ಲಿ ಇದ್ದಾರೆ. ಆದರೆ, ಸಮುದಾಯದ ವಿಚಾರ ಬಂದಾಗ ಒಂದಾಗುತ್ತೇವೆ ಎಂದರು.