ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. 
ಜಿಲ್ಲೆ

10 ಕೆಜಿಯಲ್ಲಿ ಒಂದು ಗ್ರಾಂ ಕಡಿಮೆಯಾದರೂ ಜನ ಒಪ್ಪಲ್ಲ: ಯಡಿಯೂರಪ್ಪ ಕಿಡಿ

ಶಿವಮೊಗ್ಗ: ಕಾಂಗ್ರೆಸ್‌ನ ಗ್ಯಾರೆಂಟಿಯಲ್ಲಿ ಒಂದಾಗಿರುವ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ವಿತರಣೆ ಮಾಡಬೇಕು. 10 ಕೆಜಿಯಲ್ಲಿ ಒಂದು ಗ್ರಾಂ ಕಡಿಮೆಯಾದರೂ ಜನರು ಅದನ್ನು ಒಪ್ಪುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ವಿಚಾರದಲ್ಲಿ ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ. ಹೆಚ್ಚುವರಿಯಾಗಿ ಅಕ್ಕಿ ಕೊಡಲಿಕ್ಕೆ ಕೇಂದ್ರ ಒಪ್ಪಿರಲಿಲ್ಲ. ಅದು ರಾಜ್ಯ ಸರ್ಕಾರದ ಜವಾಬ್ದಾರಿ. ಎಲ್ಲಿಂದ ಆದರೂ ಖರೀದಿ ಮಾಡಿ ಜನರಿಗೆ ಕೊಡಬೇಕು. ಕಾಂಗ್ರೆಸ್ ನಾಯಕರು 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆಂದು ಭರವಸೆ ಕೊಟ್ಟಿದ್ದರು. ಅವರು ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು. ಅದರಲ್ಲಿ ಒಂಚೂರು ಕಡಿಮೆಯಾದರೂ ಜನ ಅದನ್ನು ಸಹಿಸುವುದಿಲ್ಲ. ಹಾಗಾಗಿ ಅವರು ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕಿದೆ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅನಗತ್ಯ ದೂಷಣೆ ಮಾಡುವುದು ಸರಿಯಲ್ಲ. ಯಾವುದೇ ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚುವರಿ ಅಕ್ಕಿ ಕೊಡುತ್ತೇವೆಂದು ಹೇಳಿಲ್ಲ. ಈಗ ಕೊಡುತ್ತಿರುವುದು ಕೂಡ ಕೇಂದ್ರ. ಅದು ಉಚಿತವಾಗಿ ನೀಡುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿನಾಃ ಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಲ್ಲಿಯಾದರೂ ತಂದು ಗೊಂದಲ ಮಾಡದೇ ಅಕ್ಕಿ ವಿತರಣೆ ಮಾಡಬೇಕು ಎಂದರು.